ಮುಂಬೈ : ಟೀಮ್ ಇಂಡಿಯಾದ ಟಿ20 ನಾಯಕ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ದಂಪತಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಭರ್ಜರಿ ಪೈಪೋಟಿಯ ನಡುವೆಯೇ ಸೂರ್ಯಕುಮಾರ್ ಮನೆಯಲ್ಲಿ ಸಂಭ್ರಮ ಮನೆಮಾಡಿದ್ದು, ಕ್ರೀಡಾ ಜಗತ್ತಿನ ಗಣ್ಯರು, ಸಹ ಆಟಗಾರರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಜುಲೈ 2016ರಲ್ಲಿ ವಿವಾಹವಾಗಿದ್ದ ಈ ಜೋಡಿ, ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಸೀಮಂತ ಕಾರ್ಯಕ್ರಮವನ್ನು ಆಚರಿಸಿಕೊಂಡಿದ್ದರು. ದೇಶೀಯ ಕ್ರಿಕೆಟ್‌ನಿಂದ ಹಿಡಿದು ಟೀಮ್ ಇಂಡಿಯಾದ ಟಿ20 ನಾಯಕನಾಗಿ ಬೆಳೆಯುವವರೆಗೆ ಸೂರ್ಯಕುಮಾರ್ ಅವರ ಪ್ರತಿಯೊಂದು ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತಿರುವ ಪತ್ನಿ ದೇವಿಶಾ ಅವರ ಜೊತೆಗಿನ ಈ ಹೊಸ ಖುಷಿ ಅಭಿಮಾನಿಗಳಲ್ಲೂ ಮಂದಹಾಸ ಮೂಡಿಸಿದೆ.
ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸೂರ್ಯಕುಮಾರ್ ಡೌಟ್?
ಮುಂಬರುವ ಮೇ 10ರಂದು ರಾಯ್‌ಪುರದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯುವ ಬಗ್ಗೆ ಭಾರೀ ಅನುಮಾನಗಳು ಸೃಷ್ಟಿಯಾಗಿವೆ. ಮುಂಬೈ ಇಂಡಿಯನ್ಸ್ ತಂಡವು ಈಗಾಗಲೇ ಮುಂದಿನ ಪಂದ್ಯಕ್ಕಾಗಿ ರಾಯ್‌ಪುರಕ್ಕೆ ಪ್ರಯಾಣ ಬೆಳೆಸಿದೆ. ಆದರೆ ಪತ್ನಿಯ ಹೆರಿಗೆಯ ಕಾರಣದಿಂದಾಗಿ ಕುಟುಂಬದೊಂದಿಗೆ ಇರಲು ನಿರ್ಧರಿಸಿದ ಸೂರ್ಯಕುಮಾರ್, ತಂಡದೊಂದಿಗೆ ಪ್ರಯಾಣಿಸಿಲ್ಲ. ಹೀಗಾಗಿ ಆರ್‌ಸಿಬಿ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಅವರು ಲಭ್ಯರಿರುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಮುಂಬೈ ಫ್ರಾಂಚೈಸಿ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಪ್ಲೇಆಫ್ ಪ್ರವೇಶಿಸಲು ಮುಂಬೈ ಪಾಲಿಗೆ ಈ ಪಂದ್ಯ ಅತ್ಯಂತ ಪ್ರಮುಖವಾಗಿದ್ದು, ತಂಡದ ಆಧಾರಸ್ತಂಭವಾಗಿರುವ ಸೂರ್ಯ ಅಲಭ್ಯರಾದರೆ ತಂಡಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.
ನಾಯಕತ್ವದ ಬಿಕ್ಕಟ್ಟಿನಲ್ಲಿ ಮುಂಬೈ ಇಂಡಿಯನ್ಸ್
ಬೆನ್ನುನೋವಿನ (Back spasm) ಕಾರಣದಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕಳೆದ ಪಂದ್ಯದಿಂದ ಕಾಯಂ ನಾಯಕ ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ರಿಯಾನ್ ರಿಕೆಲ್ಟನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡವು 229 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಭರ್ಜರಿ ಜಯ ಸಾಧಿಸಿತ್ತು. ಇದೀಗ ಹಾರ್ದಿಕ್ ಪಾಂಡ್ಯ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂಬ ಮಾಹಿತಿಯಿದ್ದು, ಜೊತೆಗೆ ಸೂರ್ಯಕುಮಾರ್ ಯಾದವ್ ಕೌಟುಂಬಿಕ ಜವಾಬ್ದಾರಿಯಲ್ಲಿರುವುದರಿಂದ ಮುಂಬೈ ತಂಡಕ್ಕೆ ನಾಯಕತ್ವದ ದೊಡ್ಡ ಸಮಸ್ಯೆ ಎದುರಾಗಿದೆ.
ಒಂದು ವೇಳೆ ಇವರಿಬ್ಬರೂ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಅಲಭ್ಯರಾದರೆ, ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ. ಒಟ್ಟಾರೆಯಾಗಿ ಸೂರ್ಯಕುಮಾರ್ ಅವರ ಮಗುವಿನ ಆಗಮನದ ಖುಷಿಯ ನಡುವೆ ಮುಂಬೈ ಪಾಳಯದಲ್ಲಿ ಮುಂದಿನ ಪಂದ್ಯದ ನಾಯಕತ್ವದ ಲೆಕ್ಕಾಚಾರಗಳು ಗರಿಗೆದರಿವೆ.
ಇದನ್ನೂ ಓದಿ : ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಹೋದವರ ಚಿನ್ನಕ್ಕೆ ಕನ್ನ – ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ!



















