ಬೆಂಗಳುರು : ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹರಿಬಿಟ್ಟಿದ್ದು, ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಭಾವಪೂರ್ಣ ಶ್ರದ್ಧಾಂಜಲಿಯ ಪೋಸ್ಟರ್ ಮತ್ತು ಪೋಸ್ಟ್‌ಗಳು ಫೇಸ್‌ಬುಕ್ ಸೇರಿದಂತೆ ಹಲವು ಕಡೆ ಭಾರಿ ವೈರಲ್ ಆಗಿದ್ದವು. ಇದನ್ನು ನೋಡಿ ಅವರ ಅಭಿಮಾನಿಗಳು ಹಾಗೂ ಆತ್ಮೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಇದೀಗ ಈ ಸುಳ್ಳು ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ನಟ ದೊಡ್ಡಣ್ಣ ಸಿಟ್ಟಾಗಿದ್ದಾರೆ. ತಾವೇ ಸ್ಪಷ್ಟನೆ ಕೊಡುವ ಮೂಲಕ ಈ ವದಂತಿಗೆ ಬ್ರೇಕ್ ಹಾಕಿದ್ದಾರೆ.
“ನಾನು ಆರೋಗ್ಯವಾಗಿದ್ದೇನೆ, ಚೆನ್ನಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಇನ್ನೂ ನೂರು ಕಾಲ ಬದುಕುತ್ತೇನೆ ಎಂದು ಹೇಳಿದ್ದಾರೆ. ನಿಧನದ ಬಗ್ಗೆ ಸುಳ್ಳು ಪೋಸ್ಟ್ ಮಾಡಿದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಯಾರೋ ಅವಿವೇಕಿಗಳು ಈ ರೀತಿಯ ಸುಳ್ಳು ಸುದ್ದಿ ಹರಡಿದ್ದಾರೆ. ಬೆಳಗ್ಗೆಯಿಂದ ನನಗೆ ನಿರಂತರವಾಗಿ ಫೋನ್ ಕರೆಗಳು ಬರುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ದೊಡ್ಡಣ್ಣ, ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ. ಅವರ ಸ್ಪಷ್ಟನೆಯ ನಂತರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಹಿರಿಯ ನಟರ ಆರೋಗ್ಯದ ಬಗ್ಗೆ ಪದೇ ಪದೇ ಇಂತಹ ವಿಕೃತಿ ಮೆರೆಯುವ ಕಿಡಿಗೇಡಿಗಳ ವಿರುದ್ಧ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೂಡಲೇ ಅವರ ವಿರುದ್ದ ಕ್ರಮ ಜರುಗಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಇದನ್ನೂ ಓದಿ : ಇನ್ಶೂರೆನ್ಸ್ ಹಣಕ್ಕಾಗಿ ಪ್ರಿಯತಮೆಯ ಕೊಲೆ ; ಆಕ್ಸಿಡೆಂಟ್ ಕಥೆ ಕಟ್ಟಿ ಎಸ್ಕೇಪ್ ಆಗಿದ್ದ ಪ್ರಿಯಕರನ ಗ್ಯಾಂಗ್ ಅರೆಸ್ಟ್!



















