ಚಂಡೀಗಢ : ಪಂಜಾಬ್‌ನ ಜಲಂಧರ್ ಮತ್ತು ಅಮೃತಸರದಲ್ಲಿರುವ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ನೆಲೆಗಳ ಬಳಿ ಸಂಭವಿಸಿದ ಅವಳಿ ಸ್ಫೋಟಗಳು ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿವೆ. ಈ ಸ್ಫೋಟಗಳ ಹಿಂದೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಪಾಕಿಸ್ತಾನದ ಸಂಚು ಅಡಗಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಶಂಕಿಸಿದ್ದರೆ, ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಾತ್ರ ಈ ಕೃತ್ಯದ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ನೇರ ಆರೋಪ ಮಾಡಿದ್ದಾರೆ.
ಅದೃಷ್ಟವಶಾತ್ ಈ ಎರಡೂ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯ ಬೆನ್ನಲ್ಲೇ ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಪಂಜಾಬ್ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ರಾಜ್ಯಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಬಿಜೆಪಿಯತ್ತ ಬೊಟ್ಟು ಮಾಡಿದ ಸಿಎಂ ಮಾನ್
2027ರಲ್ಲಿ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಭಗವಂತ್ ಮಾನ್ ಗಂಭೀರ ಆರೋಪ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿಯ ಪಂಜಾಬ್ ಘಟಕವು ‘ನೆಕ್ಸ್ಟ್ ಪಂಜಾಬ್’ (ಮುಂದಿನ ಗುರಿ ಪಂಜಾಬ್) ಎಂದು ಟ್ವೀಟ್ ಮಾಡಿತ್ತು. ಇದನ್ನು ಉಲ್ಲೇಖಿಸಿದ ಸಿಎಂ ಮಾನ್, “ಬಿಜೆಪಿ ಎಲ್ಲಿ ಸ್ಪರ್ಧಿಸಲು ಬಯಸುತ್ತದೆಯೋ ಅಲ್ಲೆಲ್ಲಾ ಇಂತಹ ಅಹಿತಕರ ಘಟನೆಗಳು ನಡೆಯುತ್ತವೆ. ಇಂತಹ ಘಟನೆಗಳ ಮೂಲಕ ಜನರಲ್ಲಿ ಭಯ ಹುಟ್ಟಿಸಿ ಮತ ಪಡೆಯಲು ಬಿಜೆಪಿ ಬಯಸುತ್ತಿದೆಯೇ? ಇಂತಹ ಕೃತ್ಯಗಳನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜಲಂಧರ್‌ನಲ್ಲಿ ನಿಗೂಢ ಸ್ಕೂಟರ್ ಸ್ಫೋಟ
ಮೊದಲ ಸ್ಫೋಟ ಮಂಗಳವಾರ ಜಲಂಧರ್‌ನ ಬಿಎಸ್‌ಎಫ್ ಚೌಕ್ ಬಳಿಯಿರುವ ಬಿಎಸ್‌ಎಫ್ ಪ್ರಧಾನ ಕಚೇರಿಯ ಸಮೀಪ ಸಂಭವಿಸಿದೆ. ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್‌ವೊಂದು ಏಕಾಏಕಿ ಸ್ಫೋಟಗೊಂಡಿದ್ದು, ಕ್ಷಣಾರ್ಧದಲ್ಲೇ ಬೆಂಕಿಗೆ ಆಹುತಿಯಾಗಿದೆ. ಇದರಿಂದಾಗಿ ಸ್ಥಳದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿ, ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಫೋಟದ ತೀವ್ರತೆ ಸೆರೆಯಾಗಿದ್ದು, ಸ್ಫೋಟದ ವೇಳೆ ಸ್ಕೂಟರ್ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ಓಡಿಹೋಗುತ್ತಿರುವ ದೃಶ್ಯವೂ ದಾಖಲಾಗಿದೆ. ಸದ್ಯ ಸ್ಕೂಟರ್ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಲಂಧರ್ ಪೊಲೀಸ್ ಆಯುಕ್ತೆ ಧನ್‌ಪ್ರೀತ್ ಕೌರ್ ತಿಳಿಸಿದ್ದಾರೆ.
ಅಮೃತಸರದ ಸೇನಾ ಕ್ಯಾಂಪ್ ಬಳಿ ಗ್ರೆನೇಡ್ ದಾಳಿ ಶಂಕೆ
ಜಲಂಧರ್ ಘಟನೆ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ, ಅಮೃತಸರದ ಖಾಸಾ ಪ್ರದೇಶದಲ್ಲಿರುವ ಸೇನಾ ಕ್ಯಾಂಪ್ ಮತ್ತು ಬಿಎಸ್‌ಎಫ್ ನೆಲೆಯ ಹೊರಭಾಗದಲ್ಲಿ ಮಂಗಳವಾರ ತಡರಾತ್ರಿ 10.30 ರಿಂದ 11 ಗಂಟೆಯ ಸುಮಾರಿಗೆ ಎರಡನೇ ಸ್ಫೋಟ ಸಂಭವಿಸಿದೆ. ಈ ಪ್ರದೇಶವು ಅಟ್ಟಾರಿ-ವಾಘಾ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿದೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗ್ರೆನೇಡ್ ಎಸೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಸೇನಾ ಸಿಬ್ಬಂದಿ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ದೌಡಾಯಿಸಿದ್ದು, ಸ್ಫೋಟದ ನಿಖರ ಕಾರಣವನ್ನು ಪತ್ತೆಹಚ್ಚಲು ಎಲ್ಲ ಆಯಾಮಗಳಿಂದಲೂ ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : ತಮಿಳುನಾಡು ರಾಜಕಾರಣದಲ್ಲಿ ಹೊಸ ಟ್ವಿಸ್ಟ್ : ವಿಜಯ್ ‘ಟಿವಿಕೆ’ಗೆ ಕಾಂಗ್ರೆಸ್ ಷರತ್ತುಬದ್ಧ ಬೆಂಬಲ


















