ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿ, ರಾಜಕೀಯಕ್ಕೆ ಭರ್ಜರಿಯಾಗಿ ಪ್ರವೇಶ ಮಾಡಿರುವ ನಟ ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ‘ (ಟಿವಿಕೆ) ಪಕ್ಷಕ್ಕೆ ಇದೀಗ ಆನೆಬಲ ಬಂದಿದೆ. ತಮಿಳುನಾಡಿನಲ್ಲಿ ಮುಂದಿನ ಸರ್ಕಾರ ರಚಿಸಲು ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ತನ್ನ ಬೆಂಬಲವನ್ನು ಘೋಷಿಸಿದೆ. ಆದರೆ, ಹಸ್ತಪಾಳಯದ ಈ ಬೆಂಬಲವು ಒಂದು ಪ್ರಮುಖ ಷರತ್ತಿಗೊಳಪಟ್ಟಿದೆ.
ಕೋಮುವಾದಿ ಶಕ್ತಿಗಳಿಗೆ ‘ನೋ ಎಂಟ್ರಿ’
ಚುನಾವಣೆಯಲ್ಲಿ ಅದ್ಭುತ ಸಾಧನೆ ತೋರಿರುವ ವಿಜಯ್ ಪಕ್ಷದೊಂದಿಗೆ ಕೈಜೋಡಿಸಲು ಮುಂದಾಗಿರುವ ಕಾಂಗ್ರೆಸ್, ಮೈತ್ರಿಕೂಟದಲ್ಲಿ ಯಾವುದೇ ಕಾರಣಕ್ಕೂ “ಕೋಮುವಾದಿ ಶಕ್ತಿಗಳನ್ನು” ಸೇರಿಸಿಕೊಳ್ಳಬಾರದು ಎಂಬ ಕಟ್ಟುನಿಟ್ಟಿನ ಆಗ್ರಹವನ್ನು ಮುಂದಿಟ್ಟಿದೆ. ಜಾತ್ಯತೀತ ತತ್ವಗಳು ಮತ್ತು ಸೈದ್ಧಾಂತಿಕ ಬದ್ಧತೆಯ ಆಧಾರದ ಮೇಲೆ ಮಾತ್ರ ಈ ಮೈತ್ರಿ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ರವಾನಿಸಿದೆ.
ಸಂವಿಧಾನ ವಿರೋಧಿಗಳಿಗೆ ಜಾಗವಿಲ್ಲ
ಈ ಮೈತ್ರಿ ಹಾಗೂ ಬೆಂಬಲದ ಕುರಿತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ಅವರು ಅಧಿಕೃತ ಹೇಳಿಕೆ ನೀಡಿದ್ದಾರೆ. “ಭಾರತದ ಸಂವಿಧಾನದಲ್ಲಿ ನಂಬಿಕೆ ಇಲ್ಲದ ಯಾವುದೇ ಕೋಮುವಾದಿ ಶಕ್ತಿಗಳನ್ನು ಟಿವಿಕೆ ತನ್ನ ಮೈತ್ರಿಕೂಟದಿಂದ ಹೊರಗಿಡುವ ಷರತ್ತಿನ ಮೇಲೆ ಮಾತ್ರ ನಮ್ಮ ಬೆಂಬಲವಿರುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. \
ಒಟ್ಟಾರೆಯಾಗಿ, ಕಾಂಗ್ರೆಸ್‌ನ ಈ ನಿರ್ಧಾರದಿಂದಾಗಿ ತಮಿಳುನಾಡಿನ ರಾಜಕೀಯ ಅಖಾಡದಲ್ಲಿ ಹೊಸ ಸಂಚಲನ ಮೂಡಿದ್ದು, ಮುಂಬರುವ ದಿನಗಳಲ್ಲಿ ಸರ್ಕಾರ ರಚನೆಯ ಸುತ್ತ ನಡೆಯಲಿರುವ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ.
ಕಾಂಗ್ರೆಸ್ ನಡೆಗೆ ಡಿಎಂಕೆ ಆಕ್ರೋಶ : ‘ಬೆನ್ನಿಗೆ ಚೂರಿ’ ಎಂದು ಕಿಡಿ
ತಮ್ಮ ದೀರ್ಘಕಾಲದ ಮಿತ್ರಪಕ್ಷವಾದ ಕಾಂಗ್ರೆಸ್ ದಿಢೀರನೆ ವಿಜಯ್ ಅವರ ‘ಟಿವಿಕೆ’ ಪಕ್ಷಕ್ಕೆ ಬೆಂಬಲ ಘೋಷಿಸಿರುವುದು ಡಿಎಂಕೆ ಪಾಳಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನ ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ಡಿಎಂಕೆ, ಹಸ್ತಪಾಳಯದ ಈ ಕ್ರಮ ‘ಬೆನ್ನಿಗೆ ಚೂರಿ ಹಾಕಿದಂತೆ’ ಎಂದು ಹರಿಹಾಯ್ದಿದೆ. ವರ್ಷಗಳ ಕಾಲ ಜೊತೆಯಾಗಿ ಸಾಗಿ, ಇದೀಗ ಹೊಸದಾಗಿ ಅಸ್ತಿತ್ವಕ್ಕೆ ಬಂದ ಪಕ್ಷದೊಂದಿಗೆ ಸರ್ಕಾರ ರಚಿಸಲು ಕೈಜೋಡಿಸುವ ಮೂಲಕ ಕಾಂಗ್ರೆಸ್ ತಮಗೆ ವಿಶ್ವಾಸದ್ರೋಹ ಮಾಡಿದೆ ಎಂಬುದು ಡಿಎಂಕೆಯ ಗಂಭೀರ ಆರೋಪವಾಗಿದೆ. ಈ ದಿಢೀರ್ ರಾಜಕೀಯ ಬೆಳವಣಿಗೆಯಿಂದಾಗಿ ತಮಿಳುನಾಡಿನ ಸಾಂಪ್ರದಾಯಿಕ ಡಿಎಂಕೆ-ಕಾಂಗ್ರೆಸ್ ಮೈತ್ರಿಯಲ್ಲಿ ಭಾರೀ ಬಿರುಕು ಮೂಡಿದೆ.
ಇದನ್ನೂ ಓದಿ : ನಡುರಸ್ತೆಯಲ್ಲೇ ಮದ್ಯ ಸೇವನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾನ್ಸ್‌ಟೇಬಲ್ ಮೇಲೆ ಹಲ್ಲೆ – ಇಬ್ಬರ ಬಂಧನ!



















