ಬೆಂಗಳೂರು : ಇಡೀ ನಗರದ ಸಮಗ್ರ ಆಡಳಿತ ನಿಯಂತ್ರಣದ ಉದ್ದೇಶದಿಂದ ರಚಿಸಲಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇಂದು ತೀವ್ರ ಹಣಕಾಸು ಸಂಕಷ್ಟಕ್ಕೆ ಸಿಲುಕಿದೆ. ನಗರ ಆಡಳಿತವನ್ನು ಕೇಂದ್ರೀಕರಿಸುವ ಉದ್ದೇಶದಿಂದ ಬಿಬಿಎಂಪಿಯನ್ನು ವಿಸರ್ಜಿಸಿ ಜಿಬಿಎ ಸ್ಥಾಪನೆ ಮಾಡಿದ ರಾಜ್ಯ ಸರ್ಕಾರ, ಇದೀಗ ಆ ಸಂಸ್ಥೆಗೆ ಅಗತ್ಯವಾದ ಅನುದಾನ ನೀಡುವಲ್ಲಿ ವಿಫಲವಾಗಿದೆ.
ಜಿಬಿಎ ಅಧೀನದಲ್ಲಿ ನಗರವನ್ನು 5 ನಗರಪಾಲಿಕೆಗಳಾಗಿ ವಿಭಜಿಸಿ ಆಡಳಿತ ವ್ಯವಸ್ಥೆ ರೂಪಿಸಲಾಗಿದೆ. ಈ ನಗರಪಾಲಿಕೆಗಳು ತಮ್ಮ ವ್ಯಾಪ್ತಿಯ ಆಸ್ತಿ ತೆರಿಗೆ ಸೇರಿದಂತೆ ವಿವಿಧ ತೆರಿಗೆಗಳನ್ನು ವಸೂಲಿ ಮಾಡಿಕೊಂಡು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಈ ಸಂಸ್ಥೆಗಳು ಜಿಬಿಎಗೆ ಯಾವುದೇ ರೀತಿಯ ಹಣಕಾಸು ಸಹಾಯ ನೀಡುತ್ತಿಲ್ಲ.
ಇನ್ನು ಜಿಬಿಎಗೆ ಸ್ವಂತ ಆದಾಯ ಮೂಲಗಳೇ ಇಲ್ಲದಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ನಗರಪಾಲಿಕೆಗಳು ಆರಂಭದಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರೂ, ತಮ್ಮ ಬಜೆಟ್‌ನಲ್ಲಿ ಜಿಬಿಎಗೆ ಯಾವುದೇ ಹಣದ ಮೀಸಲಾತಿ ಮಾಡಿಲ್ಲ. ಪರಿಣಾಮವಾಗಿ, ಜಿಬಿಎ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಅನುದಾನವನ್ನು ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಜಿಬಿಎ ರಚನೆಯಾಗುವಾಗ ರಾಜ್ಯ ಸರ್ಕಾರ ವರ್ಷಕ್ಕೆ 100 ಕೋಟಿ ಅನುದಾನ ನೀಡುವುದಾಗಿ ಘೋಷಿಸಿತ್ತು. ಆದರೆ ಇದುವರೆಗೆ ಒಂದೂ ರೂಪಾಯಿ ಬಿಡುಗಡೆಯಾಗಿಲ್ಲ. ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕಿಲ್ಲ.
ಹಣಕಾಸಿನ ಅಭಾವದಿಂದ ಜಿಬಿಎ ಖಜಾನೆ ಸಂಪೂರ್ಣ ಖಾಲಿಯಾಗಿದ್ದು, ಸಿಬ್ಬಂದಿಗೆ ವೇತನ ನೀಡುವುದಕ್ಕೂ ಸಂಕಷ್ಟ ಎದುರಾಗಿದೆ. ಸುಮಾರು 140ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಬಿಎ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಏಪ್ರಿಲ್ ತಿಂಗಳ ಸಂಬಳ ಇನ್ನೂ ಬಾಕಿಯೇ ಇದೆ. ವೇತನಕ್ಕಾಗಿ ಕಾಯುತ್ತಿರುವ ನೌಕರರು ಆತಂಕದಲ್ಲಿದ್ದಾರೆ.
ಈ ಪರಿಸ್ಥಿತಿ ಮುಂದುವರಿದರೆ ಜಿಬಿಎ ಆಡಳಿತ ಕಾರ್ಯಚಟುವಟಿಕೆಗಳು ಸಂಪೂರ್ಣವಾಗಿ ಕುಂಠಿತವಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ತಕ್ಷಣ ಅನುದಾನ ಬಿಡುಗಡೆ ಮಾಡದಿದ್ದರೆ, ಬೆಂಗಳೂರು ಮಹಾನಗರದ ಸಮಗ್ರ ಆಡಳಿತ ವ್ಯವಸ್ಥೆಯೇ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.
ರಾಜ್ಯ ಸರ್ಕಾರದ ನೆರವಿಗಾಗಿ ಕಾದಿರುವ ಜಿಬಿಎ, ಮುಂದಿನ ದಿನಗಳಲ್ಲಿ ಹೇಗೆ ಪರಿಸ್ಥಿತಿಯನ್ನು ನಿಭಾಯಿಸಲಿದೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.
ಇದನ್ನೂ ಓದಿ : ಲಕ್ನೋ ತಂಡಕ್ಕೆ ಪದಾರ್ಪಣೆ ಮಾಡಿದ ಮಧ್ಯಪ್ರದೇಶದ ಬ್ಯಾಟರ್ ಅಕ್ಷತ್ ರಘುವಂಶಿ!



















