ಚೆನ್ನೈ : ತಮಿಳುನಾಡಿನ ದಶಕಗಳ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಮಹಾ ಬದಲಾವಣೆಯೊಂದು ಸಂಭವಿಸುತ್ತಿದೆ. ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿಯುತ್ತಿದ್ದಂತೆ, ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಅಕ್ಷರಶಃ ಸುನಾಮಿಯಂತೆ ಅಪ್ಪಳಿಸಿದ್ದು, ಆಡಳಿತಾರೂಢ ಡಿಎಂಕೆ ಪಕ್ಷವು ಅನಿರೀಕ್ಷಿತವಾಗಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಈ ನಾಟಕೀಯ ಬೆಳವಣಿಗೆಯಿಂದ ಕಂಗೆಟ್ಟ ಡಿಎಂಕೆ ಕಾರ್ಯಕರ್ತರು ಪಕ್ಷದ ಕಚೇರಿಯಿಂದ ಕಣ್ಣೀರು ಹಾಕುತ್ತಾ ಹೊರಬರುತ್ತಿರುವುದು ದ್ರಾವಿಡ ರಾಜಕಾರಣದ ಅಂತ್ಯದ ಮುನ್ಸೂಚನೆಯಂತೆ ಭಾಸವಾಗುತ್ತಿದೆ.

ಲೆಕ್ಕಾಚಾರ ಉಲ್ಟಾ: ಸ್ಟಾಲಿನ್ ಪಡೆಗೆ ಭಾರಿ ಹಿನ್ನಡೆ
ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಆತ್ಮವಿಶ್ವಾಸದಲ್ಲಿದ್ದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಆರಂಭಿಕ ಟ್ರೆಂಡ್‌ಗಳು ದೊಡ್ಡ ಆಘಾತ ನೀಡಿವೆ. ಬಹುತೇಕ ಮತಗಟ್ಟೆ ಸಮೀಕ್ಷೆಗಳು ಡಿಎಂಕೆ ಮುನ್ನಡೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, ಪ್ರಸ್ತುತ ಟ್ರೆಂಡ್‌ಗಳ ಪ್ರಕಾರ ವಿಜಯ್ ಅವರ ಟಿವಿಕೆ (TVK) ಸೆಂಚುರಿ ಬಾರಿಸಿ, ಮುನ್ನುಗ್ಗುವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ಎಐಎಡಿಎಂಕೆ 67 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕೇವಲ 53 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಡಿಎಂಕೆ, ತಮಿಳುನಾಡು ರಾಜಕಾರಣದ ದ್ವಿಮುಖ ಸ್ಪರ್ಧೆಯ ಇತಿಹಾಸದಲ್ಲೇ ಮೊದಲ ಬಾರಿಗೆ ತೀವ್ರ ಮುಖಭಂಗ ಅನುಭವಿಸುತ್ತಿದೆ.
ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ – https://www.youtube.com/watch?v=Nb20pfCzHUA
ಬಿಕೋ ಎಂದ ಡಿಎಂಕೆ ಕೇಂದ್ರ ಕಚೇರಿ
ಚುನಾವಣಾ ಫಲಿತಾಂಶದ ಆರಂಭಿಕ ಗಂಟೆಗಳಲ್ಲಿ ವಿಜಯ್ ಅವರ ಪಕ್ಷದ ನಾಗಾಲೋಟ ಕಂಡುಬರುತ್ತಿದ್ದಂತೆ, ಡಿಎಂಕೆ ಪಾಳಯದಲ್ಲಿ ಮೌನ ಆವರಿಸಿದೆ. ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿ ‘ಅಣ್ಣಾ ಅರಿವಾಲಯಂ’ನಲ್ಲಿ ಜಮಾಯಿಸಿದ್ದ ಸಾವಿರಾರು ಕಾರ್ಯಕರ್ತರು ಫಲಿತಾಂಶದಿಂದ ಹತಾಶರಾಗಿ ಚದುರಲಾರಂಭಿಸಿದ್ದಾರೆ. ಕಚೇರಿಯಲ್ಲಿದ್ದ ಕುರ್ಚಿಗಳನ್ನು ತೆರವುಗೊಳಿಸಲಾಗುತ್ತಿದ್ದು, ನಾಯಕರ ಭಾವಚಿತ್ರಗಳ ಮುಂದೆ ನಿಂತು ಕಾರ್ಯಕರ್ತರು ಭಾವುಕರಾಗಿ ಕಣ್ಣೀರು ಹಾಕುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಇದು ಆಡಳಿತ ವಿರೋಧಿ ಅಲೆ ಮತ್ತು ವಿಜಯ್ ಎಂಬ “ಹೊಸ ಶಕ್ತಿ”ಯ ಪ್ರಭಾವಕ್ಕೆ ಸಾಕ್ಷಿ ಎಂದು ವಿಶ್ಲೇಷಿಸಲಾಗುತ್ತಿದೆ.
ಬದಲಾದ ರಾಜಕೀಯ ಚಿತ್ರಣ: ‘ವಿಜಯ್ ಫ್ಯಾಕ್ಟರ್’ ಸಕ್ಸಸ್!
ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಮಾತ್ರ ಹಂಚಿಹೋಗುತ್ತಿದ್ದ ತಮಿಳುನಾಡಿನ ರಾಜಕೀಯ ನಕಾಶೆಯನ್ನು ವಿಜಯ್ ಸಂಪೂರ್ಣವಾಗಿ ಬದಲಿಸಿದ್ದಾರೆ. 118 ಎಂಬ ಸರಳ ಬಹುಮತದ ಗಡಿಯನ್ನು ತಲುಪಲು ಟಿವಿಕೆ ಅತ್ಯಂತ ವೇಗವಾಗಿ ದಾಪುಗಾಲು ಹಾಕುತ್ತಿದ್ದು, ದ್ರಾವಿಡ ಸಿದ್ಧಾಂತಗಳ ನಡುವೆ ವಿಜಯ್ ಅವರ “ಬದಲಾವಣೆಯ ಮಂತ್ರ” ವರ್ಕ್ ಔಟ್ ಆಗಿದೆ. ಒಂದು ವೇಳೆ ಇದೇ ಟ್ರೆಂಡ್ ಮುಂದುವರಿದರೆ, ತಮಿಳುನಾಡಿನಲ್ಲಿ ಹೊಸ ಯುಗವೊಂದು ಆರಂಭವಾಗುವುದು ಖಚಿತವಾಗಿದ್ದು, ಡಿಎಂಕೆಯಂತಹ ಬಲಿಷ್ಠ ಸಂಘಟನೆಗೆ ಇದು ಅಸ್ತಿತ್ವದ ಪ್ರಶ್ನೆಯಾಗಿ ಪರಿಣಮಿಸಿದೆ.
ಇದನ್ನೂ ಓದಿ : ಫಲಿತಾಂಶದ ದಿನವೇ ನಟಿ ತ್ರಿಶಾ ತಿಮ್ಮಪ್ಪನ ದರ್ಶನ ಪಡೆದಿದ್ದೇಕೆ? ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ!



















