ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಕಾರ್ಯವು ಇಂದು(ಮೇ 4) ನಡೆಯಲಿದ್ದು, ಮಧ್ಯಾಹ್ನದ ವೇಳೆ ಫಲಿತಾಂಶ ಪ್ರಕಟವಾಗಲಿದೆ.
ಎರಡೂ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಅಭ್ಯರ್ಥಿಗಳು ಸೇರಿದಂತೆ ಘಟಾನುಘಟಿ ನಾಯಕರಲ್ಲಿ ಆತಂಕ ಮನೆ ಮಾಡಿದ್ದು, ಯಾರಿಗೆ ವಿಜಯ ಮಾಲೆ ಸಿಗಲಿದೆ ಎಂಬುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಇಂದು ಬೆಳಗ್ಗೆ 8 ಗಂಟೆಯಿಂದ ಎರಡೂ ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಾರಂಭವಾಗಲಿದ್ದು, ಬಹುತೇಕ ಮಧ್ಯಾಹ್ನದೊಳಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ. ಮತ ಎಣಿಕೆಗೆ ಎರಡೂ ಕ್ಷೇತ್ರಗಳಲ್ಲಿಯೂ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಬಿಗಿ ಪೊಲೀಸ್ ಕಲ್ಪಿಸಲಾಗಿದೆ.

ಮತ ಎಣಿಕೆ ನಡೆಯುವ ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ಕಲಂ-144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಅಧಿಕೃತ ಅಭ್ಯರ್ಥಿಗಳು ಹಾಗೂ ಸಂಬಂಧಪಟ್ಟ ರಾಜಕೀಯ ಪಕ್ಷಗಳ ಏಜೆಂಟರು ಸೇರಿದಂತೆ ಚುನಾವಣಾ ಆಯೋಗದ ಅಗತ್ಯ ಪಾಸ್ ಹೊಂದಿರುವವರನ್ನು ಹೊರತುಪಡಿಸಿ ಅನ್ಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಾರೀ ಹಣಾಹಣಿ ಏರ್ಪಟ್ಟಿದೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಶಾಮನೂರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ, ಅತ್ತ ಬಿಜೆಪಿಯಿಂದ ಶ್ರೀನಿವಾಸ ದಾಸ್ ಕರಿಯಪ್ಪ ಕಣದಲ್ಲಿದ್ದಾರೆ. ದಾವಣಗೆರೆಯ ಡಿಆರ್ಆರ್ ವಿದ್ಯಾಸಂಸ್ಥೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. 14 ಟೇಬಲ್‍ಗಳಲ್ಲಿ ಮತ ಎಣಿಕೆ ಆರಂಭವಾಗಲಿದ್ದು, ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದೆ.
ಮತ್ತೊಂದೆಡೆ ಮಾಜಿ ಸಚಿವ ಎಚ್.ವೈ.ಮೇಟಿ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ಕ್ಷೇತ್ರದ ಮತ ಎಣಿಕೆ ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿವಿಯಲ್ಲಿ ಬೆಳಗ್ಗೆ 8ರಿಂದ ನಡೆಯಲಿದ್ದು, ಮತ ಎಣಿಕೆಗೆ ಜಿಲ್ಲಾಡಳಿತವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಹಿರಿಯ ಶಾಸಕ ದಿವಂಗತ ಎಚ್.ವೈ.ಮೇಟಿ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಕಿರಿಯ ಪುತ್ರ ಉಮೇಶ್ ಮೇಟಿ ಸ್ಪರ್ಧಿಸಿದ್ದರು. ಮತ್ತೊಂದೆಡೆ ಮೇಟಿ ಕುಟುಂಬದ ಒಳ ಜಗಳ, ಆಡಳಿತ ವಿರೋಧಿ ಅಲೆಯನ್ನೇ ಮುಂದಿಟ್ಟುಕೊಂಡು ಎದುರಾಳಿಯಾದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ತೀವ್ರ ಪೈಫೋಟಿ ನೀಡಿದ್ದರು.
ದಾವಣಗೆರೆ ದಕ್ಷಿಣದಲ್ಲಿ ಶೇ.68.43ರಷ್ಟು, ಬಾಗಲಕೋಟೆಯಲ್ಲಿ ಶೇ.68.74ರಷ್ಟು ಮತದಾನ
ಏ.9ರಂದು ನಡೆದ ಉಪಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ.68.43ರಷ್ಟು ಮತ್ತು ಬಾಗಲಕೋಟೆ ಕ್ಷೇತ್ರದಲ್ಲಿ ಶೇ.68.74ರಷ್ಟು ಮಂದಿ ಮತದಾನ ನಡೆದಿತ್ತು. ತೀವ್ರ ಪ್ರತಿಷ್ಠೆ-ಪೈಪೋಟಿ ಸೃಷ್ಟಿಸಿರುವ ಈ ಉಪಚುನಾವಣೆ ಗೆಲುವಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವು ಮಂದಿ ಪ್ರಚಾರ ನಡೆಸಿದ್ದರು.
ಇತ್ತ ಪ್ರತಿಪಕ್ಷ ಬಿಜೆಪಿಯ ಅಭ್ಯರ್ಥಿಗಳ ಪರವಾಗಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಬಿಎಸ್‍ವೈ ಸಹಿತ ಘಟಾನುಘಟಿ ನಾಯಕರು ಪ್ರಚಾರ ಕೈಗೊಂಡಿದ್ದರು. ಇಂದು ನಡೆಯಲಿರುವ ಮತ ಎಣಿಕೆ ನಂತರ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ.
ಇದನ್ನೂ ಓದಿ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿ ಅರೆಸ್ಟ್!



















