ಬೆಳಗಾವಿ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿಯನ್ನು ಬೆಳಗಾವಿ ಕ್ಯಾಂಪ್ ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
RR vs ಡಿಸಿ ನಡುವಿನ ಪಂದ್ಯದಲ್ಲಿ ಬೆಟ್ಟಿಂಗ್ ಪಡೆಯುತ್ತಿದ್ದ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಬೆಳಗಾವಿಯ ಶಾಸ್ತ್ರಿ ನಗರ ನಿವಾಸಿ ಸಾಹೀಲ್ ಪಾಟೀಲ್ (23) ಬಂಧಿತನಾಗಿದ್ದಾನೆ. ಬಂಧಿತನಿಂದ ಮೊಬೈಲ್ ಫೋನ್ ಹಾಗೂ ₹12,900 ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮೊಬೈಲ್‌ನಲ್ಲೇ ಪ್ರತಿ ಕ್ಷಣದ ಆಟದ ಮೇಲೆ ಬೆಟ್ಟಿಂಗ್ ಪಡೆಯುತ್ತಿದ್ದುದಾಗಿ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



















