ವಾಷಿಂಗ್ಟನ್ : ಅಮೆರಿಕದ ಪ್ರಸಿದ್ಧ ಬ್ಯಾಂಕ್ ಜೆಪಿ ಮೋರ್ಗನ್‌ನ (JPMorgan) ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಮಾಜಿ ಉದ್ಯೋಗಿಯೊಬ್ಬರು ಮಾಡಿದ್ದ ಲೈಂಗಿಕ ಕಿರುಕುಳ ಹಾಗೂ ‘ಸೆಕ್ಸ್ ಸ್ಲೇವ್’ (ಲೈಂಗಿಕ ಗುಲಾಮಗಿರಿ) ಆರೋಪಗಳು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿವೆ. ಆದರೆ, ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಆರೋಪಿತ ಅಧಿಕಾರಿ ಲೋರ್ನಾ ಹಜ್ದಿನಿ, ಇವು ಸಂಪೂರ್ಣ ಆಧಾರರಹಿತ ಹಾಗೂ ಕಟ್ಟುಕಥೆ ಎಂದು ಸ್ಪಷ್ಟಪಡಿಸಿದ್ದಾರೆ.
ಬ್ಯಾಂಕ್ ನಡೆಸಿದ ಆಂತರಿಕ ತನಿಖೆಯಲ್ಲೂ ಈ ಆರೋಪಗಳಿಗೆ ಯಾವುದೇ ಕನಿಷ್ಠ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ನ್ಯೂಯಾರ್ಕ್ ಕೌಂಟಿ ಸುಪ್ರೀಂ ಕೋರ್ಟ್‌ನಲ್ಲಿ ‘ಜಾನ್ ಡೋ’ ಎಂಬ ಅಲಿಯಾಸ್ ಹೆಸರಿನಲ್ಲಿ ಮಾಜಿ ಉದ್ಯೋಗಿಯೊಬ್ಬರು ಕಳೆದ ಸೋಮವಾರ ದೂರು ದಾಖಲಿಸಿದ್ದರು. ಜೆಪಿ ಮೋರ್ಗನ್‌ನ ಲೆವರೇಜ್ಡ್ ಫೈನಾನ್ಸ್ ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ 37 ವರ್ಷದ ಲೋರ್ನಾ ಹಜ್ದಿನಿ ವಿರುದ್ಧ ಅವರು ಗಂಭೀರ ಆರೋಪಗಳನ್ನು ಮಾಡಿದ್ದರು.
ತನಗೆ ರೋಹಿಪ್ನಾಲ್ (Rohypnol) ಮತ್ತು ವಯಾಗ್ರದಂತಹ (Viagra) ಮಾದಕ ವಸ್ತುಗಳನ್ನು ನೀಡಿ ಲೈಂಗಿಕವಾಗಿ ಬಳಸಿಕೊಳ್ಳಲಾಗಿತ್ತು ಹಾಗೂ ಆಕೆಯ ಬೇಡಿಕೆಗಳಿಗೆ ಒಪ್ಪದಿದ್ದರೆ ಬೋನಸ್ ತಡೆಹಿಡಿಯುವ ಬೆದರಿಕೆ ಹಾಕಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಈ ಆರೋಪಗಳನ್ನು ಲೋರ್ನಾ ಅವರ ವಕೀಲರು ಕಟುವಾಗಿ ನಿರಾಕರಿಸಿದ್ದಾರೆ. ದೂರುದಾರರು ಹೇಳುವ ಸ್ಥಳಕ್ಕೆ ಲೋರ್ನಾ ಎಂದಿಗೂ ಭೇಟಿಯೇ ನೀಡಿಲ್ಲ ಮತ್ತು ಯಾವುದೇ ಅಸಭ್ಯ ವರ್ತನೆ ತೋರಿಲ್ಲ ಎಂದು ವಕೀಲರು ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಗೆ ಸ್ಪಷ್ಟಪಡಿಸಿದ್ದಾರೆ.
ಸಾಕ್ಷ್ಯ ಒದಗಿಸಲು ದೂರುದಾರನ ನಕಾರ
ಈ ವಿವಾದದ ಕುರಿತು ಜೆಪಿ ಮೋರ್ಗನ್ ಬ್ಯಾಂಕ್ ಕೂಡ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಉದ್ಯೋಗಿಯ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಬ್ಯಾಂಕ್‌ನ ಮಾನವ ಸಂಪನ್ಮೂಲ ವಿಭಾಗ ಹಾಗೂ ಆಂತರಿಕ ಕಾನೂನು ತಂಡಗಳು ನಡೆಸಿದ ವಿಸ್ತೃತ ತನಿಖೆಯಲ್ಲಿ ಈ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳು ದೊರೆತಿಲ್ಲ. ತನಿಖೆಯ ಭಾಗವಾಗಿ ಕಚೇರಿಯ ಫೋನ್ ಕರೆಗಳು ಹಾಗೂ ಇಮೇಲ್‌ಗಳನ್ನು ಪರಿಶೀಲಿಸಲಾಗಿದೆ. ಹಲವು ಉದ್ಯೋಗಿಗಳು ತನಿಖೆಗೆ ಸಂಪೂರ್ಣ ಸಹಕರಿಸಿದ್ದರೂ, ಸ್ವತಃ ದೂರುದಾರ ಮಾತ್ರ ತನಿಖೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಾನೆ. ಅಲ್ಲದೆ, ಪ್ರಕರಣವನ್ನು ಸಾಬೀತುಪಡಿಸಲು ಅಗತ್ಯವಿದ್ದ ಪ್ರಮುಖ ಮಾಹಿತಿಯನ್ನು ನೀಡಲು ಆತ ಹಿಂದೇಟು ಹಾಕಿದ್ದಾನೆ ಎಂದು ಬ್ಯಾಂಕ್‌ನ ವಕ್ತಾರರು ತಿಳಿಸಿದ್ದಾರೆ. ದೂರುದಾರನು ಜೆಪಿ ಮೋರ್ಗನ್ ಬ್ಯಾಂಕ್ ವಿರುದ್ಧವೂ ದೂರು ದಾಖಲಿಸಿದ್ದು, ಬ್ಯಾಂಕ್ ಈ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ ಎಂದು ಆರೋಪಿಸಿದ್ದಾನೆ.
ಹಣ ಸುಲಿಗೆಯ ಯತ್ನ ಮತ್ತು ಹುಸಿಯಾದ ಬೋನಸ್ ಬೆದರಿಕೆ ಕಥೆ
ವರದಿಗಳ ಪ್ರಕಾರ, ಮೇ 2025ರಲ್ಲೇ ಈ ಮಾಜಿ ಉದ್ಯೋಗಿಯು ಜನಾಂಗೀಯ ಮತ್ತು ಲಿಂಗಾಧಾರಿತ ಕಿರುಕುಳ ಹಾಗೂ ಅಧಿಕಾರದ ದುರ್ಬಳಕೆಯ ಕುರಿತು ಆಂತರಿಕ ದೂರು ದಾಖಲಿಸಿದ್ದ. ಆ ಬಳಿಕ ಸಂಸ್ಥೆಯಿಂದ ಹೊರಹೋಗಲು ಕೋಟ್ಯಂತರ ರೂಪಾಯಿಗಳ (ಮಲ್ಟಿ-ಮಿಲಿಯನ್ ಪೌಂಡ್) ಬೃಹತ್ ಪರಿಹಾರಕ್ಕಾಗಿ ಚೌಕಾಸಿ ನಡೆಸಿದ್ದ ಎಂಬ ಸ್ಫೋಟಕ ಮಾಹಿತಿಯೂ ಹೊರಬಿದ್ದಿದೆ.
ಗಮನಾರ್ಹ ಸಂಗತಿಯೆಂದರೆ, ದೂರುದಾರ ಮತ್ತು ಲೋರ್ನಾ ಇಬ್ಬರೂ ಒಂದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೂ, ಅವರ ವರದಿ ಮಾಡುವ ಮೇಲಧಿಕಾರಿಗಳು (Reporting managers) ಬೇರೆಯಾಗಿದ್ದರು. ಹೀಗಾಗಿ, ದೂರುದಾರನ ವಾರ್ಷಿಕ ಬೋನಸ್ ತಡೆಹಿಡಿಯುವ ಯಾವುದೇ ಅಧಿಕಾರ ಲೋರ್ನಾಗೆ ಇರಲಿಲ್ಲ ಎಂಬುದು ಆತ ನೀಡಿದ್ದ ದೂರಿನ ನೈಜತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಸಹೋದ್ಯೋಗಿಗಳು ಲೋರ್ನಾ ಅವರನ್ನು ಅತ್ಯುತ್ತಮ ಉದ್ಯೋಗಿ ಎಂದು ಬಣ್ಣಿಸಿದ್ದು, ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ನೆರವಾಗುವ ಎನ್‌ಜಿಒ ಜೊತೆಗೂ ಅವರು ಗುರುತಿಸಿಕೊಂಡಿದ್ದಾರೆ. ಈ ಸುಳ್ಳು ಆರೋಪಗಳು ಅವರ ವೃತ್ತಿಪರ ಪ್ರತಿಷ್ಠೆಗೆ ಉದ್ದೇಶಪೂರ್ವಕವಾಗಿ ಧಕ್ಕೆ ತಂದಿವೆ ಎಂದು ಅವರ ಆಪ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ತಲೆಗೆ ಪೆಟ್ಟು ತಿಂದ ಎನ್‌ಗಿಡಿ.. ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಲ್ಲಿ ತೀವ್ರ ಆತಂಕ!



















