ಬೆಳಗಾವಿ : ಮಹಿಳೆ ಮತ್ತು ಮಕ್ಕಳ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲೇ ಕುಟುಂಬವೊಂಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನದ ಪೂಜೆ ಹಾಗೂ ಪ್ರೀತಿ ವಿಚಾರವನ್ನಿಟ್ಟುಕೊಂಡು ಕುರುಬ ಸಮಾಜದವರಿಂದಲೇ ಕುರುಬ ಸಮಾಜದ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಘಟನೆ ಬೆಳಗಾವಿಯ ಕೊಂಡಸಕೊಪ್ಪ ಗ್ರಾಮದಲ್ಲಿ ನಡೆದಿದೆ.
ಅಷ್ಟೇ ಅಲ್ಲದೇ, ಆ ಕುಟುಂಬದ ಜೊತೆ ಮಾತಾಡಿದವರಿಗೆ 5000 ದಂಡ ಹಾಗೂ ಮಾತಾಡಿದವರ ಬಗ್ಗೆ ಮಾಹಿತಿ ಕೊಟ್ಟವರಿಗೆ 1000 ರೂಪಾಯಿ ಬಹುಮಾನ ಕೂಡ ಘೋಷಣೆ ಮಾಡಿರುವ ಆರೋಪ ಕೇಳಿಬಂದಿದೆ.
ನರಸೋಬಾ ಸಾಂಬ್ರೇಕರ್ ಕುಟುಂಬ ಬಹಿಷ್ಕಾರಕ್ಕೆ ಒಳಗಾಗಲು ಆಕೆಯ ಪತ್ನಿಯ ಪ್ರೇಮ ಪ್ರಕರಣ ಕಾರಣ ಎನ್ನಲಾಗಿದೆ. ನರಸೋಬಾ ಅವರ ಪತ್ನಿ ರೇಣುಕಾ ಎಂಬುವವರು ಮದುವೆ ಮೊದಲು ಅನ್ಯ ಜಾತಿಯ ಯುವಕನನ್ನು ಪ್ರೀತಿ ಮಾಡ್ತಿದ್ರು ಎನ್ನುವ ವದಂತಿ ಹಬ್ಬಿತ್ತು. ಬಳಿಕ ಆಕೆ ನರಸೋಬಾ ಅವರನ್ನ ಮದುವೆಯಾಗಿದ್ದರಂತೆ.
ಗ್ರಾಮದ ಬೀರದೇವರ ಪೂಜಾರಿ ಆಗಿದ್ದ ನರಸೋಬಾ ಸಾಂಬ್ರೇಕರ್ ಕುಟುಂಬಕ್ಕೆ ಸಹೋದರ ಸಂಬಂಧಿಗಳೇ ಬಹಿಷ್ಕಾರ ಹಾಕಿದ್ದಾರೆ ಎನ್ನಲಾಗಿದೆ. ಜೊತೆಗೆ ದೇವಾಲಯದ ಪೂಜೆ ವಿಚಾರದಲ್ಲಿ ಪಂಚ ಕಮಿಟಿ ಜೊತೆಗೆ ಭಿನ್ನಾಭಿಪ್ರಾಯ ಮೂಡಿತ್ತು. ದೇವಾಲಯದ ಪೂಜಾರಿ ಹೇಳುವ ಭವಿಷ್ಯಕ್ಕೆ ನರಸೋಬಾ ವಿರೋಧ ವ್ಯಕ್ತಪಡಿಸಿದ್ದರಂತೆ, ಈ ಎರಡು ಕಾರಣ ಮುಂದಿಟ್ಟುಕೊಂಡು ಪಂಚ ಕಮಿಟಿಯಿಂದ ನರಸೋಬ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ ಕೊಟ್ಟಿದ್ದಾರೆ ಎನ್ನುವ ಆರೋಪವಿದೆ.
ಈ ಬಹಿಷ್ಕಾರದ ಬೆನ್ನಲ್ಲೇ ಮದುವೆ, ಹಬ್ಬ ಹಾಗೂ ಇನ್ನಿತರ ಶುಭ ಕಾರ್ಯಗಳಿಗೆ ಆಹ್ವಾನವಿಲ್ಲದೆ ಸಾಂಬ್ರೆಕರ್ ಕುಟುಂಬ ಒಂಟಿಯಾಗಿದೆ. ಗ್ರಾಮದ ಇತರ ಸಮಾಜದವರೊಂದಿಗೆ ಮಾತನಾಡುವ ಅವಕಾಶವಿದ್ದರೂ, ಸ್ವಜಾತಿಯವರೇ ದೂರ ಇಟ್ಟಿರುವುದು ಕುಟುಂಬವನ್ನು ಕಂಗಾಲಾಗಿಸಿದೆ. ನಮಗೂ ಗೌರವದಿಂದ ಬದುಕಲು ಅವಕಾಶ ಕೊಡಿ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ಈ ಸಂಬಂಧ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿ 15 ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ. ಇದೇ ನಡುವೆ, ತಡರಾತ್ರಿ ದುಷ್ಕರ್ಮಿಗಳು ಸಾಂಬ್ರೆಕರ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾಟಾಚಾರಕ್ಕೆ ಪರಿಶೀಲಿಸಿ ವಾಪಸ್ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೀವ ಭಯದಲ್ಲಿ ದಿನ ದೂಡುತ್ತಿರುವ ನಮಗೆ ರಕ್ಷಣೆ ನೀಡಿ ಎಂದು ಸಾಂಬ್ರೆಕರ್ ಕುಟುಂಬ ನ್ಯಾಯಕ್ಕಾಗಿ ಅಂಗಲಾಚುತ್ತಿದೆ.
ಇದನ್ನೂ ಓದಿ : ಆ್ಯಂಬುಲೆನ್ಸ್‌ಗೆ ಅಂಟಿದ್ದ ಪತಿಯ ರಕ್ತವನ್ನು ಪತ್ನಿಯಿಂದ ತೊಳೆಸಿದ ಸಿಬ್ಬಂದಿ : ಮುಂದೇನಾಯ್ತು?



















