ಕಟ್ನಿ (ಮಧ್ಯಪ್ರದೇಶ) : ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಆತ ರಕ್ತದಿಂದಾಗಿ ಆಂಬ್ಯುಲೆನ್ಸ್ ಒಳಭಾಗ ಗಲೀಜಾಗಿದೆ ಎಂಬ ಕಾರಣಕ್ಕೆ, ಗಾಯಾಳುವಿನ ಪತ್ನಿಯ ಕೈಯಿಂದಲೇ ಇಡೀ ಆಂಬ್ಯುಲೆನ್ಸ್ ತೊಳೆಸಿದಂಥ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಆಡಳಿತ ಮಂಡಳಿ, ಕರ್ತವ್ಯಲೋಪವೆಸಗಿದ ಇಬ್ಬರು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ.
ಕಟ್ನಿ ಜಿಲ್ಲೆಯ ಕರೇಲಾ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಹುಲ್ ಬರ್ಮನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಸ್ಥಳೀಯ ‘108’ ಆ್ಯಂಬುಲೆನ್ಸ್ ಮೂಲಕ ಕಟ್ನಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಗಾಯಾಳು ರಾಹುಲ್ ಅವರ ದೇಹದಿಂದ ತೀವ್ರ ರಕ್ತಸ್ರಾವವಾಗಿತ್ತು. ಪರಿಣಾಮ ಆಂಬ್ಯುಲೆನ್ಸ್ ವಾಹನದ ಒಳಭಾಗ ಮಲಿನವಾಗಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡ ಕರ್ತವ್ಯನಿರತ ತುರ್ತು ವೈದ್ಯಕೀಯ ತಂತ್ರಜ್ಞ (ಇಎಂಟಿ) ಮೋಹಿತ್ ಖಟಿಕ್, ಗಾಯಾಳುವಿನ ಪತ್ನಿ ಪ್ರಮಿಳಾ ಬರ್ಮನ್ ಅವರಿಗೆ ನೀವೇ ಆಂಬ್ಯುಲೆನ್ಸ್ ಸ್ವಚ್ಛಗೊಳಿಸಬೇಕು ಎಂದು ತಾಕೀತು ಮಾಡಿದ್ದಾನೆ. ಅಷ್ಟೇ ಅಲ್ಲದೆ, ಪತಿಗೆ ಅಪಘಾತವಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ಆಕೆಯ ಕೈಯಿಂದಲೇ ಇಡೀ ವಾಹನವನ್ನು ತೊಳೆಸುವ ಕೆಲಸ ಮಾಡಿಸಿದ್ದಾನೆ.
ವಿಡಿಯೋ ವೈರಲ್ ಬೆನ್ನಲ್ಲೇ ಕ್ರಮ
ಆಸ್ಪತ್ರೆಯ ಆವರಣದಲ್ಲಿ ಮಹಿಳೆಯೊಬ್ಬರು ಆಂಬ್ಯುಲೆನ್ಸ್ ತೊಳೆಯುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋವನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದರಿಂದಾಗಿ ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಕಟ್ನಿ ಜಿಲ್ಲಾಧಿಕಾರಿ ಆಶಿಶ್ ತಿವಾರಿ ಅವರು ಘಟನೆಯ ಕುರಿತು ತಕ್ಷಣವೇ ತನಿಖೆಗೆ ಆದೇಶಿಸಿದರು. ಈ ಕುರಿತು ತನಿಖೆ ನಡೆಸಿದ ಮುಖ್ಯ ವೈದ್ಯಾಧಿಕಾರಿ (ಸಿಎಂಎಚ್ಒ) ರಾಜ್ ಸಿಂಗ್ ಠಾಕೂರ್, ಸಿಬ್ಬಂದಿಯ ಈ ಕೃತ್ಯವು ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದು ಖಂಡನೀಯ ಹಾಗೂ ಒಪ್ಪಲಾಗದ ನಡವಳಿಕೆ ಎಂದು ವರದಿ ನೀಡಿದರು.
ಸಿಬ್ಬಂದಿ ಕೆಲಸದಿಂದ ವಜಾ
ಘಟನೆಯ ತನಿಖಾ ವರದಿಯ ಆಧಾರದ ಮೇಲೆ, ಆ್ಯಂಬುಲೆನ್ಸ್ ಸೇವೆಯ ನಿರ್ವಹಣಾ ಜವಾಬ್ದಾರಿ ಹೊತ್ತಿರುವ ‘ಜೆಎಇಎಸ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಯು ಕಠಿಣ ಕ್ರಮ ಕೈಗೊಂಡಿದೆ. ಅಮಾನವೀಯವಾಗಿ ವರ್ತಿಸಿದ ಇಎಂಟಿ ಮೋಹಿತ್ ಖಟಿಕ್ ಹಾಗೂ ಆ್ಯಂಬುಲೆನ್ಸ್ ಚಾಲಕ ದೇವಾ ಸಾಹು ಇಬ್ಬರನ್ನೂ ಸೇವೆಯಿಂದ ವಜಾಗೊಳಿಸಿದೆ. ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ತಡೆಯಲು ಹಾಗೂ ಸಿಬ್ಬಂದಿಯಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ತಿಮ್ಮಪ್ಪನ ಸನ್ನಿಧಿಗೆ ಮತ್ತೆ ‘ನಂದಿನಿ’ ಘಮ.. ತಿರುಪತಿ ಲಡ್ಡುವಿಗೆ ಮರಳಿದ ಕನ್ನಡಿಗರ ನಂದಿನಿ ತುಪ್ಪ



















