ಮ್ಯಾಡ್ರಿಡ್ : ಅಂತಾರಾಷ್ಟ್ರೀಯ ಕ್ರೀಡಾ ಲೋಕದ ಅತ್ಯುನ್ನತ ಗೌರವ ಎಂದೇ ಪರಿಗಣಿಸಲ್ಪಡುವ ‘ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್-2026’ (Laureus World Sports Awards) ಸಮಾರಂಭವು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಅದ್ಧೂರಿಯಾಗಿ ಜರುಗಿತು.
ಇಡೀ ಭಾರತೀಯ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ವರ್ಷದ ಅತ್ಯುತ್ತಮ ಕ್ರೀಡಾ ತಂಡ’ (World Team of the Year) ವಿಭಾಗದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ನಿರಾಸೆಯಾಗಿದ್ದು, ಫ್ರಾನ್ಸ್‌ನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ‘ಪ್ಯಾರಿಸ್ ಸೇಂಟ್ ಜರ್ಮನ್’ (PSG) ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿದ್ದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ, ಲಾರೆಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಮಹಿಳಾ ಕ್ರಿಕೆಟ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲೆಯ ರನ್ ಬೆನ್ನಟ್ಟಿ ಜಯ ಸಾಧಿಸಿದ್ದು ಹಾಗೂ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತದ ಸಾಧನೆಯನ್ನು ಲಾರೆಸ್ ಅಕಾಡೆಮಿ ಗುರುತಿಸಿತ್ತು. ಆದರೆ, ಅಂತಿಮ ಹಂತದಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಭಾರತೀಯ ವನಿತೆಯರು ವಿಫಲರಾಗಿದ್ದಾರೆ.
ಮತ್ತೊಂದೆಡೆ, ಲೂಯಿಸ್ ಎನ್ರಿಕ್ ಅವರ ಮಾರ್ಗದರ್ಶನದಲ್ಲಿ 2025ರ ಸಾಲಿನಲ್ಲಿ ಅಭೂತಪೂರ್ವ ಯಶಸ್ಸು ಕಂಡಿದ್ದ ಪಿಎಸ್‌ಜಿ (PSG) ತಂಡವು ಈ ಪ್ರಶಸ್ತಿಗೆ ಅರ್ಹವಾಗಿಯೇ ಆಯ್ಕೆಯಾಗಿದೆ. ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಇಂಟರ್ ಮಿಲನ್ ವಿರುದ್ಧ 5-0 ಅಂತರದ ಭರ್ಜರಿ ಜಯ ಸಾಧಿಸಿದ್ದಲ್ಲದೆ, ಫ್ರೆಂಚ್ ಲೀಗ್, ಫ್ರೆಂಚ್ ಕಪ್ ಸೇರಿದಂತೆ ಒಟ್ಟು ಆರು ಪ್ರಮುಖ ಟ್ರೋಫಿಗಳನ್ನು ಗೆದ್ದು ಬೀಗಿದ್ದ ಪಿಎಸ್‌ಜಿ, ಜಾಗತಿಕ ಕ್ರೀಡಾ ವೇದಿಕೆಯಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ. ಈ ಪ್ರಶಸ್ತಿ ರೇಸ್‌ನಲ್ಲಿ ಇಂಗ್ಲೆಂಡ್ ಮಹಿಳಾ ಫುಟ್ಬಾಲ್ ತಂಡ, ಮೆಕ್ಲಾರೆನ್ ಫಾರ್ಮುಲಾ 1 ತಂಡ ಮತ್ತು ಒಕ್ಲಹೋಮ ಸಿಟಿ ಥಂಡರ್ ಅಂತಹ ಪ್ರಬಲ ತಂಡಗಳೂ ಇದ್ದವು.
ಭಾರತದ ಮಹಿಳಾ ತಂಡಕ್ಕೆ ಪ್ರಶಸ್ತಿ ಸಿಗದಿದ್ದರೂ, ಲಾರೆಸ್ ಅಕಾಡೆಮಿಯಿಂದ ನಾಮನಿರ್ದೇಶನಗೊಂಡಿರುವುದು ಭಾರತೀಯ ಮಹಿಳಾ ಕ್ರಿಕೆಟ್‌ನ ಬೆಳವಣಿಗೆಗೆ ಸಂದ ದೊಡ್ಡ ಜಯವೆಂದೇ ವಿಶ್ಲೇಷಿಸಲಾಗುತ್ತಿದೆ. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಈ ಹಿಂದೆ ಹೇಳಿದಂತೆ, ಈ ನಾಮನಿರ್ದೇಶನವು ಭಾರತೀಯ ಕ್ರಿಕೆಟ್‌ನ ಜಾಗತಿಕ ಮಟ್ಟದ ಸಾಧನೆಗೆ ಸಾಕ್ಷಿಯಾಗಿದೆ. ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತದ ಮಹಿಳಾ ತಂಡ, ಮುಂದಿನ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಯಶಸ್ಸು ಸಾಧಿಸುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ : ಸೂರ್ಯಕುಮಾರ್ ಕಳಪೆ ಫಾರ್ಮ್‌ಗೆ ಅಭಿಮಾನಿಗಳ ಆಕ್ರೋಶ ; MIಗೆ ಹೊರೆಯಾದರೇ ‘ಮಿಸ್ಟರ್ 360’?


















