ಬೆಂಗಳೂರು: 2025ರ ಚಾಂಪಿಯನ್ಸ್ ಟ್ರೋಫಿ ಬಳಿಕ ಮೊಹಮ್ಮದ್ ಶಮಿ ಅವರನ್ನು ಭಾರತೀಯ ಕ್ರಿಕೆಟ್ ತಂಡದಲ್ಲಿ ಏಕೆ ಪರಿಗಣಿಸುತ್ತಿಲ್ಲ ಎಂಬ ಪ್ರಶ್ನೆ ಸತತವಾಗಿ ಕಾಡುತ್ತಿದೆ. ಪ್ರತಿ ಬಾರಿ ಆಯ್ಕೆ ಸಮಿತಿ ಸಭೆ ಸೇರಿದಾಗಲೂ ಈ ಪ್ರಶ್ನೆ ಮುನ್ನೆಲೆಗೆ ಬರುತ್ತದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪೈಕಿ ಒಬ್ಬರಾಗಿದ್ದರೂ, ಅವರಿಗೆ ಮರಳಿ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.ರಣಜಿ ಟ್ರೋಫಿಯಲ್ಲಿ ಬಂಗಾಳ ಪರ 7 ಪಂದ್ಯಗಳಿಂದ ಕೇವಲ 16.72ರ ಸರಾಸರಿಯಲ್ಲಿ 37 ವಿಕೆಟ್ಗಳನ್ನು ಕಬಳಿಸಿದರೂ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಶಮಿ ವಿಫಲರಾಗಿದ್ದಾರೆ. ಫಿಟ್ನೆಸ್ ಹಾಗೂ ಪಂದ್ಯದ ಸನ್ನದ್ಧತೆಯ ಬಗ್ಗೆ ಆಯ್ಕೆ ಸಮಿತಿ ಅನುಮಾನ ವ್ಯಕ್ತಪಡಿಸುತ್ತಲೇ ಇದೆ. ಆದರೆ ತಾನು ಸಂಪೂರ್ಣ ಫಿಟ್ ಆಗಿರುವುದಾಗಿ ಶಮಿ ಹೇಳಿಕೊಳ್ಳುತ್ತಿದ್ದಾರೆ.
ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದೇನು?
ನ್ಯೂಜಿಲೆಂಡ್ ಪ್ರವಾಸ ಹಾಗೂ ಟಿ20 ಸರಣಿಗೆ ತಂಡ ಪ್ರಕಟವಾದಾಗ ಶಮಿ ಅವರನ್ನು ಮತ್ತೆ ಕಡೆಗಣಿಸಲಾಯಿತು. ಆದರೆ, ಇದೇ ವೇಳೆ ಮತ್ತೊಬ್ಬ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರಿಗೆ ಮರಳಿ ಅವಕಾಶ ನೀಡಲಾಗಿತ್ತು. ಈ ಬೆಳವಣಿಗೆಯಿಂದಾಗಿ ಶಮಿ ಅವರ ಭವಿಷ್ಯದ ಬಗ್ಗೆ ಚರ್ಚೆಗಳು ಮತ್ತಷ್ಟು ಕಾವೇರಿವೆ. ಈ ಕುರಿತು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಟೀಮ್ ಇಂಡಿಯಾದ ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್, “ಮೊಹಮ್ಮದ್ ಶಮಿ ಇನ್ನೇನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ತಾವು ಯಾರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರನ್ನು ಫಾರ್ಮ್ ಆಧಾರದ ಮೇಲೆ ಆಯ್ಕೆ ಮಾಡಬೇಕು ಅಷ್ಟೇ ಎಂದು ಅರುಣ್ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲೇ ದೆಹಲಿ ವಿರುದ್ಧ 4 ವಿಕೆಟ್ ಪಡೆಯುವ ಮೂಲಕ ಶಮಿ ತಮ್ಮ ಫಾರ್ಮ್ ಅನ್ನು ಮತ್ತೆ ಪ್ರದರ್ಶಿಸಿದ್ದಾರೆ.
ಭುವನೇಶ್ವರ್ ಕುಮಾರ್ ಫಿಟ್ನೆಸ್ ಬಗ್ಗೆ ಎಚ್ಚರಿಕೆ
ಇದೇ ವೇಳೆ, ಭುವನೇಶ್ವರ್ ಕುಮಾರ್ ಅವರ ಪುನರಾಗಮನ ಹಾಗೂ 2027ರ ಏಕದಿನ ವಿಶ್ವಕಪ್ಗೆ ಅವರ ಆಯ್ಕೆ ಸಾಧ್ಯತೆಗಳ ಬಗ್ಗೆಯೂ ಭರತ್ ಅರುಣ್ ಮಾತನಾಡಿದ್ದಾರೆ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರ 2025 ಹಾಗೂ 2026ರಲ್ಲಿ ಒಟ್ಟು 45 ವಿಕೆಟ್ ಪಡೆದು ತಂಡದ ಸತತ ಎರಡು ಪ್ರಶಸ್ತಿ ಗೆಲುವಿನಲ್ಲಿ ಭುವಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೂ, ವಿಶ್ವಕಪ್ ಬಗ್ಗೆ ಈಗಲೇ ಮಾತನಾಡುವುದು ತರಾತುರಿಯಾಗುತ್ತದೆ ಎಂದು ಅರುಣ್ ಹೇಳಿದ್ದಾರೆ. “ಭುವನೇಶ್ವರ್ ಅತ್ಯುತ್ತಮ ಬೌಲರ್ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಮುಂದಿನ ಒಂದೂವರೆ ವರ್ಷಗಳ ಕಾಲ ಅವರು ತಮ್ಮ ಫಿಟ್ನೆಸ್ ಅನ್ನು ಹೇಗೆ ಕಾಯ್ದುಕೊಳ್ಳುತ್ತಾರೆ ಎಂಬುದು ಮುಖ್ಯ. ಸದ್ಯ ನಮ್ಮ ಗಮನ ನ್ಯೂಜಿಲೆಂಡ್ ಪ್ರವಾಸದ ಮೇಲಿರಬೇಕು” ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಭುವಿ ಅವರ ಪ್ರಸ್ತುತ ಫಾರ್ಮ್ ಹಾಗೂ ದೈಹಿಕ ಕ್ಷಮತೆಯ ಆಧಾರದ ಮೇಲೆ ಮಾತ್ರವೇ ಭವಿಷ್ಯದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ:ಬಕಿಂಗ್ಹ್ಯಾಮ್ ಅರಮನೆ ಎದುರು ಗಂಗೂಲಿ, ಲಾರಾ ಜೊತೆ ಕ್ರಿಕೆಟ್ ಆಡಿದ ಪ್ರಿನ್ಸ್ ವಿಲಿಯಂ!



















