ನಾಸಿಕ್ : ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಕಿರುಕುಳ ಮತ್ತು ಬಲವಂತದ ಮತಾಂತರ ಯತ್ನದ ಆರೋಪಗಳು ದೇಶಾದ್ಯಂತ ಸಂಚಲನ ಮೂಡಿಸಿರುವಂತೆಯೇ ಇದೀಗ ಕಚೇರಿಯ ಪುರುಷ ಉದ್ಯೋಗಿಯೊಬ್ಬರು ತಮಗಾದ ಭೀಕರ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಕಚೇರಿಯಲ್ಲಿ ತನಗೆ ಬಲವಂತವಾಗಿ ನಮಾಜ್ ಮಾಡುವಂತೆ ಮತ್ತು ಕಲ್ಮಾ ಪಠಿಸುವಂತೆ ಒತ್ತಾಯಿಸಿದ್ದಲ್ಲದೆ, ಮಕ್ಕಳಾಗದ ವಿಚಾರವನ್ನು ಮುಂದಿಟ್ಟುಕೊಂಡು ಆರೋಪಿಗಳು ಅತ್ಯಂತ ಕೀಳಾಗಿ ನಿಂದಿಸಿದ್ದಾರೆ ಎಂಬ ಆಘಾತಕಾರಿ ಸತ್ಯವನ್ನು ಅವರು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ.
ಸಂತ್ರಸ್ತ ಉದ್ಯೋಗಿಯು ದೈವಭಕ್ತರಾಗಿದ್ದು, ರುದ್ರಾಕ್ಷಿಯನ್ನೂ ಧರಿಸುತ್ತಿದ್ದರು.
2022ರಲ್ಲಿ ಅವರು ಸಂಸ್ಥೆಗೆ ಸೇರಿದಾಗಿನಿಂದಲೇ ಈ ಕರಾಳ ಪರ್ವ ಆರಂಭವಾಗಿತ್ತು. ತಂಡದ ನಾಯಕ (ಟೀಮ್ ಲೀಡರ್) ತೌಸಿಫ್ ಅಖ್ತರ್ ಮತ್ತು ಸಹೋದ್ಯೋಗಿ ದಾನಿಶ್ ಶೇಖ್ ಈತನನ್ನು ಗುರಿಯಾಗಿಸಿಕೊಂಡು ಕೀಳು ಹೇಳಿಕೆ ನೀಡಲು ಹಾಗೂ ಕಿರುಕುಳ ನೀಡಲು ಆರಂಭಿಸಿದ್ದರು. ಹಿಂದೂ ದೇವರುಗಳನ್ನು ನಿಂದಿಸುವುದು, ನಂಬಿಕೆಗಳನ್ನು ಪ್ರಶ್ನಿಸುವುದು ಹಾಗೂ ಮಹಾರಾಷ್ಟ್ರದ ಪೂಜ್ಯ ವ್ಯಕ್ತಿಗಳನ್ನು ಹಂಗಿಸುವುದು ಅವರ ನಿತ್ಯದ ಕಾಯಕವಾಗಿತ್ತು.
ರಾತ್ರಿ ಪಾಳಿಯ ಮುಕ್ತಾಯದ ನಂತರ ಸಂತ್ರಸ್ತನನ್ನು ಬಲವಂತವಾಗಿ ಹೋಟೆಲ್‌ಗೆ ಕರೆದೊಯ್ದು, ಶುದ್ಧ ಸಸ್ಯಾಹಾರಿಯಾಗಿದ್ದರೂ ಮಾಂಸಾಹಾರ ಸೇವಿಸುವಂತೆ ಒತ್ತಾಯಿಸುತ್ತಿದ್ದರು. 2023ರ ಈದ್ ಹಬ್ಬದಂದು ತೌಸಿಫ್ ತನ್ನ ಮನೆಗೆ ಕರೆದೊಯ್ದು ಬಲವಂತವಾಗಿ ಧಾರ್ಮಿಕ ಟೋಪಿ ಹಾಕಿಸಿ, ನಮಾಜ್ ಮಾಡಿಸಿದ್ದ. ಆ ಫೋಟೋಗಳನ್ನು ಕಚೇರಿಯ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿ ತೀವ್ರವಾಗಿ ಅವಮಾನಿಸಿದ್ದರು ಎಂದು ಸಂತ್ರಸ್ತ ಆರೋಪಿಸಿದ್ದಾರೆ.
ವೈಯಕ್ತಿಕ ಜೀವನದ ನಿಂದನೆ, ಕೊಲೆ ಬೆದರಿಕೆ
ಆರೋಪಿಗಳ ದೌರ್ಜನ್ಯ ಕೇವಲ ಧಾರ್ಮಿಕ ನಿಂದನೆಗೆ ಸೀಮಿತವಾಗಿರಲಿಲ್ಲ. ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗದ ವಿಚಾರವನ್ನು ಮುಂದಿಟ್ಟುಕೊಂಡು ಅತ್ಯಂತ ಅಮಾನುಷವಾಗಿ ವರ್ತಿಸಿದ್ದರು. “ವೈದ್ಯಕೀಯ ಚಿಕಿತ್ಸೆ ಪಡೆದರೂ ಮಕ್ಕಳಾಗುತ್ತಿಲ್ಲವಲ್ಲ. ಒಂದು ಕೆಲಸ ಮಾಡು- ಮಕ್ಕಳಾಗಬೇಕಿದ್ದರೆ ನಿನ್ನ ಹೆಂಡತಿಯನ್ನು ನಮ್ಮ ಬಳಿ ಕಳುಹಿಸು” ಎಂದು ಹೇಳುವ ಮೂಲಕ ಆರೋಪಿಗಳು ವಿಕೃತಿಯ ಪರಮಾವಧಿ ಮೆರೆದಿದ್ದರು. ಇದನ್ನು ವಿರೋಧಿಸಿದಾಗ ತನ್ನ ಮೇಲೆ ತೌಸಿಫ್ ಟೇಬಲ್ ಫ್ಯಾನ್ ಎಸೆದು ಕೊಲೆ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೆ, ಸಂತ್ರಸ್ತನ ತಂದೆಗೆ ಪಾರ್ಶ್ವವಾಯು ಉಂಟಾದಾಗಲೂ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆ ಅವರು ಗುಣಮುಖರಾಗುತ್ತಾರೆ ಎಂದು ಆಮಿಷವೊಡ್ಡಿ ಮತಾಂತರಕ್ಕೆ ಪ್ರಚೋದನೆ ನೀಡಲಾಗಿತ್ತು. ರುದ್ರಾಕ್ಷಿ ಮಾಲೆಯನ್ನು ತೆಗೆಯುವಂತೆಯೂ ಪದೇಪದೆ ಒತ್ತಡ ಹೇರಲಾಗುತ್ತಿತ್ತು ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ.
ಆರೋಪಿಗಳ ಬೇಡಿಕೆಗಳಿಗೆ ಮಣಿಯಲು ಮತ್ತು ಮತಾಂತರಗೊಳ್ಳಲು ನಿರಾಕರಿಸಿದಾಗ, ಮಾನಸಿಕವಾಗಿ ಕುಗ್ಗಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಆತನ ಮೇಲೆ ಇತರರ ಕೆಲಸದ ಒತ್ತಡವನ್ನೂ ಹೇರಲಾಯಿತು. ಆತನನ್ನು ಕೆಲಸದಿಂದ ವಜಾಗೊಳಿಸುವ ದುರುದ್ದೇಶದಿಂದ ಮುಖ್ಯ ಕಚೇರಿಗೆ ಸುಳ್ಳು ದೂರುಗಳನ್ನು ನೀಡಲಾಯಿತು. 2022ರಿಂದ 2026ರ ಮಾರ್ಚ್‌ವರೆಗೆ ಈ ಕಿರುಕುಳ ನಿರಂತರವಾಗಿ ನಡೆದಿತ್ತು ಎಂದು ಸಂತ್ರಸ್ತ ವಿವರಿಸಿದ್ದಾರೆ.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿಕ್ ಪೊಲೀಸರು ಮಹಿಳಾ ಪೊಲೀಸರನ್ನು ವೇಷಮರೆಸಿ ಕಚೇರಿಗೆ ಕಳುಹಿಸಿ ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಒಟ್ಟು ಒಂಬತ್ತು ಎಫ್‌ಐಆರ್ ದಾಖಲಿಸಿದ್ದಾರೆ. ತೌಸಿಫ್, ದಾನಿಶ್, ಶಾರುಖ್, ರಜಾ ಮೆಮನ್ ಮತ್ತು ಮಾನವ ಸಂಪನ್ಮೂಲ (HR) ಅಧಿಕಾರಿ ನಿದಾ ಖಾನ್ ಸೇರಿದಂತೆ ಏಳು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಇದೇ ಆರೋಪಿಗಳು ಮಹಿಳಾ ಉದ್ಯೋಗಿಗಳ ಮೇಲೂ ದೌರ್ಜನ್ಯ ಎಸಗಿದ್ದರು ಎಂಬುದು ತನಿಖೆಯಿಂದ ದೃಢಪಟ್ಟಿದೆ.
ಇದನ್ನೂ ಓದಿ : ದೆಹಲಿ ಏರ್‌ಪೋರ್ಟ್‌ನಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ!


















