ಲಕ್ನೋ : ತಮಗೆ ಯಾರೂ ದಿಕ್ಕಿಲ್ಲ ಎಂಬ ಕಾರಣಕ್ಕೆ 65 ವರ್ಷದ ವೃದ್ಧರೊಬ್ಬರು ತಾವು ಬದುಕಿರುವಾಗಲೇ ತಮ್ಮ ಸಾವಿನ ನಂತರ ನಡೆಯಬೇಕಿದ್ದ ಅಂತಿಮ ಕಾರ್ಯದ ಔತಣಕೂಟವನ್ನು (ಭಂಡಾರ) ಏರ್ಪಡಿಸಿದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಬರೋಬ್ಬರಿ 1,900 ಜನರನ್ನು ಆಹ್ವಾನಿಸಿದ್ದು, ಇದು ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ ರಾಕೇಶ್ ಯಾದವ್ ಅವರ ಆಮಂತ್ರಣ ಪತ್ರಿಕೆಯಲ್ಲಿ ಪ್ರಸಿದ್ಧ ಕವಿ ಫಿರಾಕ್ ಗೋರಖ್‌ಪುರಿ ಅವರ “ನಮ್ಮವರೇ ನಮ್ಮನ್ನು ದೋಚಿದರು, ಬೇರೆಯವರಲ್ಲಿ ಆ ಶಕ್ತಿ ಎಲ್ಲಿತ್ತು? ನೀರು ಕಡಿಮೆಯಿದ್ದಲ್ಲೇ ನನ್ನ ದೋಣಿ ಮುಳುಗಿತು” ಎಂಬ ಅರ್ಥದ ಭಾವನಾತ್ಮಕ ಸಾಲುಗಳನ್ನು ಮುದ್ರಿಸಲಾಗಿತ್ತು. “ನನ್ನ ಸಾವಿನ ನಂತರ ಈ ಕಾರ್ಯ ಮಾಡಲು ನನಗೆ ಯಾರೂ ಇಲ್ಲ. ಹೀಗಾಗಿ, ನಾನು ಬದುಕಿರುವಾಗಲೇ ಈ ಭಂಡಾರವನ್ನು (ಅನ್ನಸಂತರ್ಪಣೆ) ಏರ್ಪಡಿಸುವ ಅವಕಾಶ ನನಗೆ ಸಿಕ್ಕಿದೆ” ಎಂದು ಅವರು ಪತ್ರಿಕೆಯಲ್ಲಿ ಭಾವುಕರಾಗಿ ಬರೆದುಕೊಂಡಿದ್ದರು. ಅವರ ಆಹ್ವಾನದ ಮೇರೆಗೆ ಊರವರು, ಸಂಬಂಧಿಕರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು, ಭರ್ಜರಿ ಭೋಜನವನ್ನು ಸವಿದು ಹೋಗಿದ್ದಾರೆ.
ರಾಕೇಶ್ ಯಾದವ್ ಅವಿವಾಹಿತ. ಸಮಾಜದಲ್ಲಿ ಸಾಮಾನ್ಯವಾಗಿ ವ್ಯಕ್ತಿಯ ನಿಧನದ ನಂತರ ಆತನ ಕುಟುಂಬಸ್ಥರು ಈ ರೀತಿಯ ಔತಣಕೂಟವನ್ನು ಏರ್ಪಡಿಸುತ್ತಾರೆ. ಆದರೆ ತಮ್ಮ ಪರವಾಗಿ ಇದನ್ನು ಮಾಡಲು ಯಾರೂ ಇಲ್ಲದ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. “ನಮ್ಮ ಬಳಿ ಜಮೀನು ಇರಲಿಲ್ಲ, ಹೀಗಿರುವಾಗ ನಾನು ಮದುವೆಯಾಗುವುದಾದರೂ ಹೇಗೆ?” ಎಂದು ಅವರು ತಮ್ಮ ಹಿಂದಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಅವರಿಗೆ ಇಬ್ಬರು ಕಿರಿಯ ಸಹೋದರರಿದ್ದರು. ಆದರೆ ಒಬ್ಬರು ಅನಾರೋಗ್ಯದಿಂದ ಮೃತಪಟ್ಟರೆ, ಮತ್ತೊಬ್ಬರು ವಿವಾದವೊಂದರಲ್ಲಿ ಕೊಲೆಯಾದರು. ಅವರಿಗೆ ಮದುವೆಯಾಗದ ಓರ್ವ ಸಹೋದರಿ ಮಾತ್ರ ಇದ್ದಾರೆ. ನೆರೆಹೊರೆಯವರ ಪ್ರಕಾರ, ರಾಕೇಶ್ ಅವರು ತಮ್ಮ ಪೂರ್ವಜರ ಮನೆಯನ್ನು ಸಂಬಂಧಿಕರೊಬ್ಬರಿಗೆ ಬಿಟ್ಟುಕೊಟ್ಟಿದ್ದು, ಪ್ರಸ್ತುತ ತಾತ್ಕಾಲಿಕ ಗುಡಿಸಲೊಂದರಲ್ಲಿ ವಾಸಿಸುತ್ತಿದ್ದಾರೆ ಹಾಗೂ ಆಧ್ಯಾತ್ಮದತ್ತ ಹೆಚ್ಚಿನ ಒಲವು ಹೊಂದಿದ್ದಾರೆ.
ಔರೈಯಾದ ಲಕ್ಷ್ಮಣ್‌ಪುರ ಗ್ರಾಮದಲ್ಲಿ ನಡೆದ ಈ ‘ಜೀವಂತ ಭಂಡಾರ’ ಇದೀಗ ಎಲ್ಲರ ಬಾಯಲ್ಲೂ ಚರ್ಚೆಯ ವಿಷಯವಾಗಿದೆ. ರಾಕೇಶ್ ಯಾದವ್ ಅವರ ಈ ನಡೆಯನ್ನು ಕೆಲವರು ಸಮಾಜದೊಂದಿಗಿನ ಅವರ ಒಡನಾಟ ಎಂದು ಭಾವಿಸಿದರೆ, ಸಾಯುವ ಮುನ್ನವೇ ತನ್ನ ಸಾವಿನ ಊಟ ಹಾಕಿಸುವಷ್ಟು ಮಟ್ಟಿಗೆ ಓರ್ವ ವೃದ್ಧನನ್ನು ಕಾಡಿದ ಆ ಒಂಟಿತನ ಮತ್ತು ಹತಾಶೆ ಅನೇಕರಲ್ಲಿ ತೀವ್ರ ವಿಷಾದವನ್ನು ಮೂಡಿಸಿದೆ.
ಇದನ್ನೂ ಓದಿ : ‘ನನ್ನ ಪತ್ನಿಗೆ ಮಾಜಿ ಶಾಸಕನ ಜೊತೆ ಅಕ್ರಮ ಸಂಬಂಧವಿದೆ’ – HDK ಕಾಲಿಗೆ ಬಿದ್ದು ನ್ಯಾಯಕ್ಕಾಗಿ ಗೋಳಾಡಿದ ಪತಿ!


















