ಚೆನ್ನೈ : ತಮಿಳುನಾಡು ವಿಧಾನಸಭೆಯಲ್ಲಿ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಹಾಗೂ ಪ್ರತಿಪಕ್ಷ ಡಿಎಂಕೆ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಶುಕ್ರವಾರ ನಡೆದ ಕಲಾಪದ ವೇಳೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಟಿವಿಕೆ ನಾಯಕ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅವರನ್ನು “ಸಂಘಿ ಸಚಿವ” ಎಂದು ಜರಿದಿದ್ದು, ಇದು ಸದನದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು. ಇದೇ ವೇಳೆ, ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕಡತಗಳನ್ನು ಬಹಿರಂಗಪಡಿಸುವಂತೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಉದಯನಿಧಿ ಸ್ಟಾಲಿನ್ ಬಹಿರಂಗ ಸವಾಲು ಹಾಕಿದರು.
ಸದನದಲ್ಲಿ ತೀವ್ರ ವಾಗ್ವಾದ ನಡೆಸಿದ ಉದಯನಿಧಿ ಸ್ಟಾಲಿನ್, ಮುಖ್ಯಮಂತ್ರಿಗಳ ಹೇಳಿಕೆಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ವಿಧಾನಸಭೆಯು “ಸೂಪರ್ ಸಿಂಗರ್ ಕಾರ್ಯಕ್ರಮ”ವಾಗಿದೆಯೇ ಎಂದು ಪ್ರಶ್ನಿಸಿದ ಅವರು, ಕಡತಗಳನ್ನು ತೆರೆಯಲು ಮುಖ್ಯಮಂತ್ರಿಗಳು ಯಾವುದಾದರೂ ಜ್ಯೋತಿಷಿಗಳಿಂದ ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆಯೇ ಎಂದು ವ್ಯಂಗ್ಯವಾಡಿದರು. “ಸಿನಿಮಾ ಪಂಚ್ ಡೈಲಾಗ್‌ಗಳನ್ನು ಹೊಡೆಯುವುದನ್ನು ಬಿಟ್ಟು, ನಿಮ್ಮ ಟೇಬಲ್ ಮೇಲಿರುವ ಆ ಕಡತಗಳನ್ನು ಓಪನ್ ಮಾಡಿ. ನಿಮ್ಮ ಬಳಿ ಭ್ರಷ್ಟಾಚಾರದ ಬಗ್ಗೆ ಸಾಕ್ಷ್ಯಾಧಾರಗಳಿದ್ದರೆ ದಯವಿಟ್ಟು ಅದನ್ನು ಬಿಡುಗಡೆ ಮಾಡಿ, ನಾವು ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ” ಎಂದು ಅವರು ಗುಡುಗಿದರು.
ನೇರಪ್ರಸಾರ ಹಾಗೂ ವೈರಲ್ ವಿಡಿಯೋಗಳ ಬಗ್ಗೆ ಕಳವಳ
ವಿಧಾನಸಭೆಯ ಕಲಾಪಗಳನ್ನು ಸರ್ಕಾರ ಏಕೆ ನೇರಪ್ರಸಾರ (ಲೈವ್ ಕವರೇಜ್) ಮಾಡುತ್ತಿಲ್ಲ ಎಂದು ಉದಯನಿಧಿ ಪ್ರಶ್ನಿಸಿದರು. ನೇರಪ್ರಸಾರ ಮಾಡಲು ಸರ್ಕಾರಕ್ಕೆ ಧೈರ್ಯವಿಲ್ಲವೇ ಎಂದು ಸಚಿವ ಆದವ್ ಅರ್ಜುನ ಅವರನ್ನು ಅವರು ಕೇಳಿದರು. ಅಲ್ಲದೆ, ಸಭಾಧ್ಯಕ್ಷರು ಕಲಾಪದ ಅಧಿಕೃತ ದಾಖಲೆಗಳಿಂದ ತೆಗೆದುಹಾಕಿದ ಕೆಲವು ನಿರ್ದಿಷ್ಟ ಪದಗಳು ಹಾಗೂ ಕಲಾಪದ ಆಯ್ದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬಗ್ಗೆಯೂ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ಇಂತಹ ಘಟನೆಗಳನ್ನು ತಡೆಯಲು ಏನು ಪರಿಹಾರವಿದೆ ಎಂದು ಅವರು ಸದನದ ಗಮನ ಸೆಳೆದರು.
ಮುಖ್ಯಮಂತ್ರಿ ವಿಜಯ್ ತಿರುಗೇಟು
ಈ ವಾಗ್ವಾದಗಳಿಗೆ ಹಾಗೂ ಸವಾಲುಗಳಿಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ವಿಜಯ್, ಸೂಕ್ತ ಸಮಯದಲ್ಲಿ ಎಲ್ಲಾ ಕಡತಗಳು ಹೊರಬರಲಿವೆ ಎಂದು ಎಚ್ಚರಿಕೆ ನೀಡಿದರು. “ಅವರು ಪದೇ ಪದೇ ಸಾಕ್ಷ್ಯಾಧಾರಗಳನ್ನು ಕೇಳುತ್ತಿದ್ದಾರೆ. ಸುಮಾರು ಒಂದು ವಾರದ ಹಿಂದೆ ಹಣಕಾಸು ಸಚಿವರು ಹೇಳಿದಂತೆ, ಮೂರು ಇಲಾಖೆಗಳು ಪರಿಶೀಲಿಸಿದ ಕಡತಗಳು ನನ್ನ ಮೇಜಿನ ಮೇಲಿವೆ. ಅದನ್ನು ಅವರು ಸುಮ್ಮನೆ ಹೇಳಿಲ್ಲ, ನಿಜಕ್ಕೂ ಕಡತಗಳು ನನ್ನ ಬಳಿಯೇ ಇವೆ. ಎಲ್ಲದಕ್ಕೂ ತಕ್ಕ ಸಾಕ್ಷ್ಯಗಳಿವೆ. ನಮ್ಮನ್ನು ಆ ಕಡತಗಳನ್ನು ತೆರೆಯುವಂತೆ ಬಲವಂತ ಮಾಡಬೇಡಿ. ಸೂಕ್ತ ಸಮಯದಲ್ಲಿ ಆ ಕಡತಗಳನ್ನು ತೆರೆದಾಗ ಎಲ್ಲ ಸತ್ಯಾಸತ್ಯತೆಗಳೂ ಸರಿಯಾಗಿ ಹೊರಬರಲಿವೆ” ಎಂದು ವಿಜಯ್ ತಿರುಗೇಟು ನೀಡಿದರು.
ಹಣಕಾಸು ನಿರ್ವಹಣೆ ಹಾಗೂ ಸಾಲದ ಬಗ್ಗೆ ಆರೋಪ-ಪ್ರತ್ಯಾರೋಪ
ಆಗಸ್ಟ್ 7ರಂದು ರಾಜ್ಯ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲೂ ಈ ಉಭಯ ಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಡಿಎಂಕೆ ಆಡಳಿತಾವಧಿಯಲ್ಲಿ ರಾಜ್ಯದ ಸಾಲದ ಹೊರೆ ಹೆಚ್ಚಾಗಿದೆ ಎಂದು ತಮಿಳುನಾಡು ಹಣಕಾಸು ಸಚಿವ ವಿಲ್ಸನ್ ಆರೋಪಿಸಿದ್ದರು. ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೂ 1.28 ಲಕ್ಷ ರೂಪಾಯಿ ಸಾಲದ ಹೊರೆ ಇದೆ, ಮಹಿಳೆಯರ ಯೋಜನೆಗಳಲ್ಲಿ ನಿಮ್ಮ ನಾಯಕರ ಹೆಸರು ಇರುವಂತೆ, ಈ ಸಾಲದಲ್ಲೂ ಅವರ ಕೊಡುಗೆ ಇದೆ ಎಂದು ಅವರು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಸಚಿವ ಹಾಗೂ ಡಿಎಂಕೆ ನಾಯಕ ನೆಹರು, ಅಭಿವೃದ್ಧಿ ಕಾರ್ಯಗಳಿಗಾಗಿ ಮಾತ್ರ ಸರ್ಕಾರ ಸಾಲ ಮಾಡುತ್ತದೆ, ರಿಸರ್ವ್ ಬ್ಯಾಂಕ್ ಅನುಮತಿಯಿಲ್ಲದೆ ಸಾಲ ಮಾಡಲು ಸಾಧ್ಯವಿಲ್ಲ. ಸಾಲದ ಬಗ್ಗೆ ಮಾತನಾಡುವ ಬದಲು ಎಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂಬುದನ್ನು ನೋಡಿ ಎಂದು ಹಿಂದಿನ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.
ಇದನ್ನೂ ಓದಿ : ಡಿಗ್ರಿ, ಪಿಜಿ ಓದುವವರಿಗೆ ಗುಡ್ ನ್ಯೂಸ್ : ರಿಲಯನ್ಸ್ ಸಂಸ್ಥೆಯಿಂದ ವಿದ್ಯಾರ್ಥಿವೇತನ ಘೋಷಣೆ



















