ಉಡುಪಿ : ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ವರದಿ ಪ್ರಕಟಿಸಿದ್ದ ಖಾಸಗಿ ಪತ್ರಿಕೆಯ ಕುಂದಾಪುರ ವರದಿಗಾರ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಕ್ರಿಯ ಸದಸ್ಯ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅವರನ್ನು ಅಮಾನತು ಮಾಡಲಾಗಿದೆ.
ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ವೈದ್ಯರನ್ನು ಕೂಡಲೇ ಬಂಧಿಸಿ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕುಂದಾಪುರದಲ್ಲಿ ಡಿವೈಎಫ್‌ಐ ಸಂಘಟನೆ ಇಂದು ಪ್ರತಿಭಟನೆ ನಡೆಸಿದ್ದು, ಪತ್ರಕರ್ತನ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ವೈದ್ಯರ ವಿರುದ್ಧ ಶೀಘ್ರ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳು, ಹಿಂದಿನ ವರದಿ ಹಾಗೂ ಹಲ್ಲೆಗೆ ಮುನ್ನ ನಡೆದ ಬೆಳವಣಿಗೆಗಳನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.
ಪ್ರಕರಣದ ಹಿನ್ನೆಲೆ :
ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಇತ್ತೀಚೆಗೆ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಸುದ್ದಿ ಪ್ರಕಟಿಸಿದ್ದು, ಶಸ್ತ್ರಚಿಕಿತ್ಸೆ ನಡೆಸಲು ರೋಗಿಗಳಿಂದ ಹಣ ಪಡೆಯಲಾಗುತ್ತಿದೆ ಎಂಬ ಆರೋಪದ ಕುರಿತು ವರದಿ ಮಾಡಿದ್ದರು. ಈ ವರದಿ ಬಳಿಕ ವೈದ್ಯ ಡಾ. ಮಹೇಂದ್ರ ಶೆಟ್ಟಿ ಅವರನ್ನು ಕಾರ್ಕಳ ತಾಲೂಕಿಗೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಲಾಗಿತ್ತು. ವರದಿಯ ಬಗ್ಗೆ ಅಸಮಾಧಾನ ಹೊಂದಿದ್ದ ವೈದ್ಯ, ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು ಹಾಗೂ ಪತ್ರಕರ್ತನಿಗೆ ಬೆದರಿಕೆ ಹಾಕಿದ ಆರೋಪವೂ ಕೇಳಿಬಂದಿತ್ತು.
ಈ ನಡುವೆ ಕುಂದಾಪುರದ ಖಾಸಗಿ ಹೋಟೆಲ್‌ನಲ್ಲಿ ಇಂದು ಬೆಳಗ್ಗೆ ಶ್ರೀಕಾಂತ್ ಹೆಮ್ಮಾಡಿ ತಮ್ಮ ಪತ್ನಿ ಹಾಗೂ ಪತ್ರಕರ್ತ ಸ್ನೇಹಿತರೊಂದಿಗೆ ಇದ್ದ ವೇಳೆ ಡಾ. ಮಹೇಂದ್ರ ಶೆಟ್ಟಿ ಅಲ್ಲಿಗೆ ಬಂದಿದ್ದರು. ಮಾತನಾಡುವುದಿದೆ ಎಂದು ಶ್ರೀಕಾಂತ್ ಅವರನ್ನು ಬದಿಗೆ ಕರೆದುಕೊಂಡು ಹೋದ ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ದೃಶ್ಯಗಳು ಹೋಟೆಲ್‌ನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಶ್ರೀಕಾಂತ್ ಅವರ ಪತ್ನಿ ಹಾಗೂ ಸ್ಥಳದಲ್ಲಿದ್ದ ಮತ್ತೊಬ್ಬ ಮಹಿಳಾ ವೈದ್ಯೆ ಮಧ್ಯಪ್ರವೇಶಿಸಿ ಗಲಾಟೆಯನ್ನು ತಡೆದಿದ್ದಾರೆ.


















