ಬೆಂಗಳೂರು : ನಗರಗಳಲ್ಲಿ ಚಿಕ್ಕಾಸು ಸಂಬಳ ಕೊಡುವ ಕಂಪನಿಗಳನ್ನು ತೊರೆಯಬೇಕು, ಸ್ವಂತದ್ದೊಂದು ಉದ್ಯಮ ಆರಂಭಿಸಬೇಕು, ಆ ಮೂಲಕ ನಿರುಮ್ಮಳವಾದ ಜೀವನ ಸಾಗಿಸಬೇಕು ಎಂಬ ಕನಸು ತುಂಬ ಯುವಕ-ಯುವತಿಯರಿಗೆ ಇರುತ್ತದೆ. ಇಂತಹ ಕನಸನ್ನು ನನಸು ಮಾಡಿಕೊಳ್ಳಲು ಕೇಂದ್ರ ಸರ್ಕಾರವೇ ಸುವರ್ಣಾವಕಾಶ ನೀಡಿದೆ. ಹೌದು, ಸ್ಟಾಂಡ್-ಅಪ್ ಇಂಡಿಯಾ ಯೋಜನೆ ಮೂಲಕ ಉದ್ಯಮ ಆರಂಭಿಸುವವರಿಗೆ 10 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಕಡಿಮೆ ಬಡ್ಡಿಗೆ ಸಾಲ ನೀಡಲಾಗುತ್ತಿದೆ. ಬಿಸಿನೆಸ್ ಮನ್ ಆಗಬೇಕು ಎನ್ನುವವರು ಇದರ ಸದ್ಬಳಕೆ ಮಾಡಿಕೊಳ್ಳಬಹುದು.
ಭಾರತದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ತಳಮಟ್ಟದ ಜನರಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಮುಖ ಯೋಜನೆಗಳಲ್ಲಿ ‘ಸ್ಟ್ಯಾಂಡ್-ಅಪ್ ಇಂಡಿಯಾ’ (Stand-Up India Scheme) ಕೂಡ ಒಂದಾಗಿದೆ. ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಸಮುದಾಯದವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಈ ಯೋಜನೆಯು ಅತ್ಯಂತ ಸಹಕಾರಿಯಾಗಿದೆ.
ಯೋಜನೆಯ ಪ್ರಮುಖ ಅಂಶಗಳು
ಸಾಲದ ಮೊತ್ತ : ಈ ಯೋಜನೆಯಡಿ ಹೊಸ ಉದ್ಯಮ ಆರಂಭಿಸಲು ಬ್ಯಾಂಕ್ ಗಳ ಮೂಲಕ ₹10 ಲಕ್ಷದಿಂದ ಹಿಡಿದು ₹1 ಕೋಟಿವರೆಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ.
ಯಾರೆಲ್ಲಾ ಅರ್ಹರು : 18 ವರ್ಷ ಮೇಲ್ಪಟ್ಟ ಎಸ್ಸಿ, ಎಸ್ಟಿ ಅಥವಾ ಮಹಿಳೆಯರು ಸಾಲ ಪಡೆಯಲು ಅರ್ಹರಾಗಿರುತ್ತಾರೆ. ಪಾಲುದಾರಿಕೆ ಸಂಸ್ಥೆಗಳಾಗಿದ್ದರೆ ಕನಿಷ್ಠ ಶೇ.51 ರಷ್ಟು ಷೇರುಗಳನ್ನು ಇವರೇ ಹೊಂದಿರಬೇಕು.
ಕ್ಷೇತ್ರಗಳು : ಉತ್ಪಾದನೆ, ಸೇವಾ ವಲಯ, ವ್ಯಾಪಾರ ಅಥವಾ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಹೊಸ ಉದ್ಯಮ ಆರಂಭಿಸಲು ಹಣವನ್ನು ಬಳಸಿಕೊಳ್ಳಬಹುದು.
ಮರುಪಾವತಿ ಅವಧಿ : ಸಾಲವನ್ನು ಮರುಪಾವತಿಸಲು ಗರಿಷ್ಠ 7 ವರ್ಷಗಳ ಕಾಲಾವಕಾಶವಿದ್ದು, 18 ತಿಂಗಳವರೆಗೆ ಮನಿಟೋರಿಯಂ ಅವಧಿ ಸಿಗುತ್ತದೆ.
ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವವರು www.standupmitra.in ವೆಬ್ ಸೈಟ್ ಗೆ ಭೇಟಿ ನೀಡಬಹುದು. ಯೋಜನೆಯ ವ್ಯಾಪ್ತಿಗೆ ಬರುವ ಜಿಲ್ಲಾ ಬ್ಯಾಂಕ್ ಗಳಿಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಐಡೆಂಟಿಟಿ ಕಾರ್ಡ್, ವಿಳಾಸದ ದಾಖಲೆ, ಜಾತಿ ಪ್ರಮಾಣಪತ್ರ, ಬಿಸಿನೆಸ್ ಪ್ಲಾನ್, ಬಿಸಿನೆಸ್ ಆರಂಭಿಸುವ ಸ್ಥಳದ ವಿಳಾಸ, ಕಂಪನಿಯ ದಾಖಲೆಗಳನ್ನು ಸಲ್ಲಿಸಬಹುದು.
ಇದನ್ನೂಓದಿ : ‘ಬಾಡಿಗೆ ವಿದ್ಯಾರ್ಥಿಗಳು, ಮದ್ಯದ ಬಾಟಲಿಗಳು’ : ಸರ್ಕಾರಿ ಶಾಲೆಯ ದುರವಸ್ಥೆ ಬಯಲು ಮಾಡಿದ ಸಿಜೆಪಿ ನಾಯಕ!



















