ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷವು ಕೇವಲ ಕಚ್ಚಾ ತೈಲ, ಎಲ್‌ಪಿಜಿ, ರಸಗೊಬ್ಬರ ಪೂರೈಕೆಯ ಮೇಲೆ ಮಾತ್ರವಲ್ಲದೆ, ಭಾರತದ ಇಂಟರ್ನೆಟ್ ಸಂಪರ್ಕದ ಮೇಲೂ ಗಂಭೀರ ಪರಿಣಾಮ ಬೀರುವ ಮುನ್ಸೂಚನೆ ಲಭ್ಯವಾಗಿದೆ. ಸಮುದ್ರದ ಆಳದಲ್ಲಿ ಹರಡಿಕೊಂಡಿರುವ ಫೈಬರ್-ಆಪ್ಟಿಕ್ ಕೇಬಲ್‌ಗಳಿಗೆ ಯುದ್ಧದಿಂದ ಹಾನಿಯಾಗುವ ಸಾಧ್ಯತೆ ಇರುವುದು ಜಾಗತಿಕ ಡಿಜಿಟಲ್ ಜಗತ್ತಿನಲ್ಲಿ ಆತಂಕ ಮೂಡಿಸಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಅಂತಾರಾಷ್ಟ್ರೀಯ ಇಂಟರ್ನೆಟ್ ಸಂಚಾರದ ಶೇ.99 ರಷ್ಟು ಪಾಲು ಸಮುದ್ರದ ಅಡಿಯಲ್ಲಿರುವ ಸಬ್‌ಮೆರಿನ್ ಕೇಬಲ್‌ಗಳ ಮೂಲಕವೇ ನಡೆಯುತ್ತದೆ. ಪ್ರಸ್ತುತ ಯುದ್ಧ ನಡೆಯುತ್ತಿರುವ ಕೆಂಪು ಸಮುದ್ರ ಮತ್ತು ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಈ ಕೇಬಲ್‌ಗಳು ಈಗ ಅಪಾಯದ ಅಂಚಿನಲ್ಲಿವೆ. ವಿಶೇಷವಾಗಿ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿರುವ ಈ ಫೈಬರ್-ಆಪ್ಟಿಕ್ ಕೇಬಲ್‌ಗಳನ್ನು ಕಡಿತಗೊಳಿಸುವುದಾಗಿ ಈ ಹಿಂದೆ ಹಲವು ಬಾರಿ ಬೆದರಿಕೆ ಹಾಕಿರುವುದು ಈ ಆತಂಕಕ್ಕೆ ಮುಖ್ಯ ಕಾರಣ.
ಭಾರತದ ಮೇಲೇನು ಪರಿಣಾಮ?
ಭಾರತಕ್ಕೆ ಈ ಬೆದರಿಕೆ ಅತ್ಯಂತ ನಿರ್ಣಾಯಕವಾಗಿದೆ. ಏಕೆಂದರೆ ದೇಶದ ಒಟ್ಟು ಇಂಟರ್ನೆಟ್ ಟ್ರಾಫಿಕ್‌ನ ಸುಮಾರು ಶೇ.60ರಷ್ಟು ಭಾಗ ಮುಂಬೈನಿಂದ ಯುರೋಪ್‌ಗೆ ಕೆಂಪು ಸಮುದ್ರದ ಮೂಲಕವೇ ಸಂಪರ್ಕ ಹೊಂದಿದೆ. ಉಳಿದ ಶೇ.40ರಷ್ಟು ಸಂಚಾರ ಮಾತ್ರ ಚೆನ್ನೈನಿಂದ ಸಿಂಗಾಪುರ ಮತ್ತು ಪೆಸಿಫಿಕ್ ಮಾರ್ಗವಾಗಿ ಸಾಗುತ್ತದೆ. ಹೀಗಾಗಿ, ಪಶ್ಚಿಮ ಮಾರ್ಗದ ಕೇಬಲ್‌ಗಳಿಗೆ ಯಾವುದೇ ರೀತಿಯ ಹಾನಿಯಾದರೂ ಭಾರತದ ಇಂಟರ್ನೆಟ್ ವ್ಯವಸ್ಥೆಯ ಮೇಲೆ ನೇರವಾದ ಒತ್ತಡ ಬೀಳಲಿದೆ.
ಸಾಮಾನ್ಯ ಜನರ ಮೇಲೆ ಆಗುವ ಪರಿಣಾಮಗಳೇನು?
ಸಮುದ್ರದ ಅಡಿಯಲ್ಲಿ ಸುಮಾರು 17ಕ್ಕೂ ಹೆಚ್ಚು ಕೇಬಲ್‌ಗಳು ಈ ಭಾಗದಲ್ಲಿ ಹಾದುಹೋಗುತ್ತವೆ. ಇವುಗಳಲ್ಲಿ ಯಾವುದಾದರೂ ಒಂದು ಕೇಬಲ್ ಕಡಿತಗೊಂಡರೆ ಇಂಟರ್ನೆಟ್ ಸಂಪೂರ್ಣವಾಗಿ ಸ್ಥಗಿತಗೊಳ್ಳುವುದಿಲ್ಲ. ಆದರೆ, ಲಭ್ಯವಿರುವ ಇತರ ಮಾರ್ಗಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಇಂಟರ್ನೆಟ್ ವೇಗ ಗಣನೀಯವಾಗಿ ಕುಸಿಯಲಿದೆ. ಇದರಿಂದಾಗಿ ಆನ್‌ಲೈನ್ ಹಣಕಾಸು ವ್ಯವಹಾರಗಳು ವಿಳಂಬವಾಗುವುದು, ವಿಡಿಯೋ ಸ್ಟ್ರೀಮಿಂಗ್ ಮತ್ತು ಡೌನ್‌ಲೋಡ್ ವೇಗ ಕಡಿಮೆಯಾಗುವುದು ಹಾಗೂ ಅಪ್ಲಿಕೇಶನ್‌ಗಳ ಬಳಕೆಯಲ್ಲಿ ಅಡೆತಡೆಗಳು ಉಂಟಾಗಬಹುದು.
ವಿಶೇಷವಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಾಫ್ಟ್‌ವೇರ್ ಕಂಪನಿಗಳು ಮತ್ತು ಹೊರಗುತ್ತಿಗೆ ಕೇಂದ್ರಗಳಿಗೆ ಇದು ದೊಡ್ಡ ಆರ್ಥಿಕ ಹೊರೆ ಉಂಟುಮಾಡಲಿದೆ. ಟೆಲಿಕಾಂ ತಜ್ಞರ ಪ್ರಕಾರ, ಇಂಟರ್ನೆಟ್ ಸಂಪೂರ್ಣವಾಗಿ ಬಂದ್ ಆಗದಿದ್ದರೂ, ಸುದೀರ್ಘ ಕಾಲದವರೆಗೆ ಕೇಬಲ್ ದುರಸ್ತಿ ನಡೆಯದಿದ್ದರೆ ‘ಚೋಕಿಂಗ್’ ಪರಿಣಾಮದಿಂದಾಗಿ ಬಳಕೆದಾರರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಯುದ್ಧದ ಪರಿಸ್ಥಿತಿಯಲ್ಲಿ ಸಮುದ್ರದ ಅಡಿಯ ಮೂಲಸೌಕರ್ಯಗಳನ್ನು ಗುರಿಯಾಗಿಸುವುದು ಇತ್ತೀಚಿನ ದಿನಗಳಲ್ಲಿ ಜಾಗತಿಕ ಭದ್ರತಾ ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ : ಹೆಂಡತಿ ಕುತ್ತಿಗೆ ಮೇಲೆ ಕಾಲಿಟ್ಟು ಕೊಂದ ಗಂಡ!



















