ವಾಷಿಂಗ್ಟನ್/ದೋಹಾ: ಪರ್ಷಿಯನ್ ಕೊಲ್ಲಿಯಲ್ಲಿ ಯುದ್ಧೋನ್ಮಾದ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಕತಾರ್ ಎಲ್‌ಎನ್‌ಜಿ ಮೇಲೆ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. “ಒಂದು ವೇಳೆ ಇರಾನ್ ಮುಗ್ಧ ರಾಷ್ಟ್ರವಾದ ಕತಾರ್ ಮೇಲೆ ಮತ್ತೆ ದಾಳಿ ನಡೆಸಿದರೆ, ಇಡೀ ಸೌತ್ ಪಾರ್ಸ್ ಅನಿಲ ಕೇಂದ್ರವನ್ನೇ ಉಡಾಯಿಸಬೇಕಾಗುತ್ತದೆ” ಎಂದು ಟ್ರಂಪ್ ಗುಡುಗಿದ್ದಾರೆ. ಇರಾನ್‌ನ ದೈತ್ಯ ‘ಸೌತ್ ಪಾರ್ಸ್’ ಅನಿಲ ಕೇಂದ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಸರಣಿ ದಾಳಿಗಳನ್ನು ಆರಂಭಿಸಿದ ಬೆನ್ನಲ್ಲೇ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ದಾಳಿ ಬಗ್ಗೆ ಅಮೆರಿಕಕ್ಕೆ ಮಾಹಿತಿಯೇ ಇಲ್ಲ
ಇತ್ತೀಚೆಗೆ ಇರಾನ್‌ನ ಸೌತ್ ಪಾರ್ಸ್ ಅನಿಲ ಕೇಂದ್ರದ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿತ್ತು. ಆದರೆ, ಈ ದಾಳಿಯ ಬಗ್ಗೆ ಅಮೆರಿಕಕ್ಕೆ ಇಸ್ರೇಲ್ ಮಾಹಿತಿಯನ್ನೇ ನೀಡಿರಲಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. “ಮಧ್ಯಪ್ರಾಚ್ಯದ ಪರಿಸ್ಥಿತಿಯಿಂದ ಕೆರಳಿದ ಇಸ್ರೇಲ್ ಅತ್ಯಂತ ಆಕ್ರೋಶದಿಂದ ಈ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕತಾರ್‌ನ ಯಾವುದೇ ಪಾತ್ರವಿಲ್ಲದಿದ್ದರೂ, ಸತ್ಯ ತಿಳಿಯದ ಇರಾನ್ ಅನ್ಯಾಯವಾಗಿ ಕತಾರ್‌ನ ಎಲ್‌ಎನ್‌ಜಿ ಘಟಕಗಳ ಮೇಲೆ ದಾಳಿ ಮಾಡಿದೆ” ಎಂದು ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇರಾನ್ ತನ್ನ ಹಗೆತನವನ್ನು ಮುಂದುವರಿಸದಿದ್ದರೆ ಇಸ್ರೇಲ್ ಕೂಡ ಮುಂದಿನ ದಾಳಿಗಳನ್ನು ನಡೆಸುವುದಿಲ್ಲ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ.
ರಾಯಭಾರಿಗಳ ಉಚ್ಚಾಟನೆ
ಇಸ್ರೇಲ್‌ನ ದಾಳಿಗೆ ಪ್ರತಿಯಾಗಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯಿಂದಾಗಿ ವಿಶ್ವದ ಅತಿದೊಡ್ಡ ಎಲ್‌ಎನ್‌ಜಿ ರಫ್ತುದಾರ ರಾಷ್ಟ್ರವಾದ ಕತಾರ್ ಕಂಗಾಲಾಗಿದೆ. ‘ಕತಾರ್ ಎನರ್ಜಿ’ ಸಂಸ್ಥೆಯ ಪ್ರಕಾರ, ಹಲವು ಎಲ್‌ಎನ್‌ಜಿ ಕೇಂದ್ರಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಉತ್ಪಾದನಾ ಘಟಕಗಳಿಗೆ ವ್ಯಾಪಕ ಹಾನಿಯಾಗಿದೆ. ಈ ಘಟನೆಯಿಂದ ಕೆರಳಿದ ದೋಹಾ ಸರ್ಕಾರವು ಇರಾನ್ ರಾಯಭಾರಿ ಕಚೇರಿಯ ಅಧಿಕಾರಿಗಳು 24 ಗಂಟೆಯೊಳಗೆ ದೇಶ ಬಿಟ್ಟು ತೊರೆಯಬೇಕು ಎಂದು ಆದೇಶಿಸಿದೆ. ಕತಾರ್ ಮಾತ್ರವಲ್ಲದೆ ಯುಎಇ ದೇಶದ ಹಬ್ಶಾನ್ ಗ್ಯಾಸ್ ಘಟಕದ ಮೇಲೂ ಇರಾನ್ ದಾಳಿ ನಡೆಸಿದ್ದು, ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ತೈಲ ಬೆಲೆ ಗಗನಕ್ಕೆ
ಈ ಸಂಘರ್ಷದ ನೇರ ಪರಿಣಾಮ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ಮೇಲೆ ಬೀರಿದೆ. ಹೊರ್ಮುಜ್ ಜಲಸಂಧಿಯ ಮೂಲಕ ನಡೆಯುವ ವ್ಯಾಪಾರಕ್ಕೆ ಇರಾನ್ ಅಡ್ಡಿಪಡಿಸುತ್ತಿರುವುದರಿಂದ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 108 ರಿಂದ 111 ಡಾಲರ್‌ಗೆ ಏರಿಕೆಯಾಗಿದೆ. ಯುದ್ಧ ಆರಂಭವಾದಾಗಿನಿಂದ ತೈಲ ಬೆಲೆಯಲ್ಲಿ ಶೇ.50ರಷ್ಟು ಹೆಚ್ಚಳ ಕಂಡುಬಂದಿದೆ. ಜಾಗತಿಕವಾಗಿ ಇಂಧನ ಪೂರೈಕೆಯನ್ನು ಸರಿದೂಗಿಸಲು ಅಮೆರಿಕವು ಈಗ ವೆನೆಜುವೆಲಾ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದ್ದು, ಅಲ್ಲಿನ ಸರ್ಕಾರಿ ತೈಲ ಕಂಪನಿಗಳೊಂದಿಗೆ ವ್ಯಾಪಾರ ನಡೆಸಲು ತನ್ನ ಕಂಪನಿಗಳಿಗೆ ಅನುಮತಿ ನೀಡಿದೆ.
“ನನಗೆ ಇರಾನ್‌ನಲ್ಲಿ ಅಂತಹ ವಿನಾಶ ಮಾಡುವುದು ಇಷ್ಟವಿಲ್ಲ, ಆದರೆ ಕತಾರ್‌ನ ಎಲ್‌ಎನ್‌ಜಿ ಘಟಕದ ಮೇಲೆ ಮತ್ತೆ ದಾಳಿಯಾದರೆ ನಾನು ಹಿಂದೆಮುಂದೆ ನೋಡುವುದಿಲ್ಲ. ಇಸ್ರೇಲ್‌ನ ಸಹಾಯ ಇರಲಿ, ಇಲ್ಲದಿರಲಿ, ಇರಾನ್ ಇದುವರೆಗೆ ಕಂಡಿರದ ಅತಿ ದೊಡ್ಡ ಶಕ್ತಿಯೊಂದಿಗೆ ಅಮೆರಿಕವೇ ಸೌತ್ ಪಾರ್ಸ್ ಕೇಂದ್ರವನ್ನು ಧ್ವಂಸಗೊಳಿಸಲಿದೆ” ಎಂದು ಟ್ರಂಪ್ ಎಚ್ಚರಿಸಿರುವುದು ಮುಂದೇನು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ : ವಿಶ್ವದ ಅತಿದೊಡ್ಡ ಎಲ್‌ಎನ್‌ಜಿ ಘಟಕದ ಮೇಲೆ ಇರಾನ್ ಕ್ಷಿಪಣಿ ದಾಳಿ : ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ



















