ಬೆಂಗಳೂರು | ಧರ್ಮಸ್ಥಳದಲ್ಲಿ ಸಂಭವಿಸಿರುವ 74 ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಧರ್ಮಸ್ಥಳದಲ್ಲಿ ನಡೆದಿರುವ 74 ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಬೇಕು ಮತ್ತು ಎಸ್‌ಐಟಿ ತನಿಖೆಗೆ ಸೂಚಿಸಬೇಕು ಎಂದು ಆಗ್ರಹಿಸಿ ಸೌಜನ್ಯಾ ತಾಯಿ ಕುಸುಮಾವತಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ಪೀಠದಲ್ಲಿ ಈ “74 ಸಾವುಗಳ ತನಿಖೆ ಕುರಿತಾದ ಪಿಐಎಲ್” ವಿಚಾರಣೆ ನಡೆಯಿತು. ಹಿರಿಯ ವಕೀಲರಾದ ಎಸ್ ಬಾಲನ್ ಅವರು ಅರ್ಜಿದಾರ ಕುಸುಮಾವತಿ ಪರ ವಾದ ಮಂಡಿಸಿದರು. ಎಸ್ ಬಾಲನ್ ವಾದ ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿಗಳು “ಎಲ್ಲಾ 74 ಪ್ರಕರಣಗಳ ತನಿಖೆ ಏನೇನಾಗಿದೆ ಎಂಬ ಬಗ್ಗೆ ಸಂಪೂರ್ಣ ವರದಿ ಸಲ್ಲಿಸಿ” ಎಂದು ಸರ್ಕಾರಕ್ಕೆ ಆದೇಶ ಮಾಡಿದ್ದಾರೆ.
ವಕೀಲ ಎಸ್.ಬಾಲನ್ ಅವರ ವಾದದ ಪ್ರಮುಖ ಅಂಶಗಳು :
- 74 ಯುಡಿಆರ್ ಕೇಸ್‌ಗಳು ಪ್ರೊಸೀಜರ್ ಫಾಲೋ ಮಾಡಿಲ್ಲ. ಹೆಣಗಳನ್ನು ಸುಟ್ಟು ಹಾಕಲಾಗಿದೆ. ಪೋಸ್ಟ್ ಮಾರ್ಟಂ ಮಾಡಿಲ್ಲ.
- ಶರಾವತಿ ಲಾಡ್ಜ್ ನಲ್ಲಿ ನಡೆದ ಕೊಲೆ ಕೇಸ್ ಕೂಡಾ ಯುಡಿಆರ್ ಮಾಡಿ, ಹೆಣವನ್ನು ಸುಟ್ಟು ಹಾಕಿದ್ದಾರೆ
- ಪೊಲೀಸರ ಮನವಿ ಮೇರೆಗೆ ಗ್ರಾಮ ಪಂಚಾಯತ್ ಎಲ್ಲಾ ಯುಡಿಆರ್ ಶವಗಳನ್ನು ಸುಟ್ಟು ಹಾಕಿದೆ. ಆ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆ ಇದೆ.
- ಕೊಲೆ ಕೇಸ್ ದಾಖಲಿಸದೇ ಯುಡಿಆರ್ ದಾಖಲಿಸಿದ್ದಾರೆ.
- ಶವದ ವಿಡಿಯೋ, ಫೋಟೊಗ್ರಫಿ ಮಾಡಿಲ್ಲ. ಸಂಬಂಧಿಕರ ಪತ್ತೆಗೆ ಪತ್ರಿಕಾ ಪ್ರಕಟಣೆ ನೀಡಿಲ್ಲ
- ಲಾಡ್ಜ್ ಮಾಲೀಕರನ್ನು ವಿಚಾರಣೆ ನಡೆಸಿಲ್ಲ. ಲಾಡ್ಜ್ ಮತ್ತು ನದಿ ಬದಿಯಲ್ಲಿ ಪದೇ ಪದೇ ಶವ ಪತ್ತೆಯಾದರೂ ಲಾಡ್ಜ್ ಮಾಲೀಕರು ಮತ್ತು ಶವ ಪತ್ತೆಯಾದ ಜಮೀನು ಮಾಲೀಕರಿಗೆ ಒಂದೇ ಒಂದು ನೋಟಿಸ್ ನೀಡಿ ತನಿಖೆ ಮಾಡಿಲ್ಲ ಎಂದು ಎಸ್ ಬಾಲನ್ ವಾದ ಮಂಡಿಸಿದರು.
ಎಲ್ಲಾ ವಾದ ಆಲಿಸಿದ ಮುಖ್ಯನ್ಯಾಯಮೂರ್ತಿಗಳು, ವಿಸ್ತೃತ ಆದೇಶ ಹೊರಡಿಸಿದರು. ಶವ ಪತ್ತೆಯಾದಾಗ ಪೋಸ್ಟ್ ಮಾರ್ಟಂ ಮಾಡಿದ್ದೀರಾ? ನಾಪತ್ತೆಯಾದವರ ಪತ್ತೆಗೆ ಏನು ಕ್ರಮ ತೆಗೆದುಕೊಂಡಿದ್ದೀರಿ? Death Rate is Disproportionate! (ಸಾವಿನ ಸಂಖ್ಯೆ ಸಹಜವಾಗಿಲ್ಲ) ಈ ಕುರಿತ ತನಿಖೆ ಬೇಡ ಎಂದು ಕೈಬಿಡಲು ಸಾಧ್ಯವಿಲ್ಲ, ಆದರಿಂದ ಈ ಎಲ್ಲಾ ದಾಖಲೆಗಳನ್ನು ಮತ್ತು SIT ಈ ಕುರಿತಾಗಿ ನಡೆಸಿದ ತನಿಖೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.
ಇದನ್ನೂ ಓದಿ : ಧೈರ್ಯವಿದ್ರೆ ಎನ್‌ಕೌಂಟರ್ ಮಾಡಿ ಎಂದು ಪೊಲೀಸರಿಗೇ ಸವಾಲು ಹಾಕಿದ್ದ ಗ್ಯಾಂಗ್‌ಸ್ಟರ್ ಎನ್‌ಕೌಂಟರ್‌ಗೆ ಬಲಿ!



















