ಬೆಂಗಳೂರು ; ಇಲ್ಲಿನ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್ ಹೆಸರಲ್ಲಿ ನಡೆದಿದ್ದ 17.64 ಲಕ್ಷ ಹಣ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಕಾಶ್ಮೀರ ಮೂಲದವರು ಸೇರಿ ಒಟ್ಟು 12 ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ 13.90 ಲಕ್ಷ ನಗದು, ಕೃತ್ಯಕ್ಕೆ ಬಳಸಿದ 6 ದ್ವಿಚಕ್ರ ವಾಹನಗಳು, ಒಂದು ಕಾರು ಹಾಗೂ 13 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಮುಜಾಮಿಲ್ (23), ಶೋಯೆಬ್ (20), ಕರೀಂ (31), ವಸೀಂ (40), ಮೊಹಮ್ಮದ್ ಇಸ್ಮಾಯಿಲ್ (29), ರೆಹಾನ್ (27), ಆಯನ್ (21), ಅಖಿಲ್ ಮೊಹಮ್ಮದ್ (26), ತೌಸಿಫ್ (32), ಲಿಯಾಕತ್ ಶರೀಫ್ (33), ಅಫ್ಜಲ್ ಖಾನ್ (27) ಮತ್ತು ಇಮ್ರಾನ್ ಪಾಷಾ (40) ಎಂದು ಗುರುತಿಸಲಾಗಿದೆ. ಇವರಲ್ಲಿ ಮುಜಾಮಿಲ್ ಹಾಗೂ ಶೋಯೆಬ್ ಕಾಶ್ಮೀರದಿಂದ ಬೆಂಗಳೂರಿಗೆ ಬಿಬಿಎ ವ್ಯಾಸಂಗಕ್ಕಾಗಿ ಬಂದಿದ್ದು, ಬಳಿಕ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದರೆಂದು ತಿಳಿದುಬಂದಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಶ್ವಾಸ್ ಎಂಬುವರು ಕಾಫಿ ಶಾಪ್ ಆರಂಭಿಸಲು ಚೀನಾ ಮತ್ತು ಜಪಾನ್‌ನಿಂದ ಅಡುಗೆಮನೆಗೆ ಬೇಕಾದ ಟೈಲ್ಸ್ ಹಾಗೂ ಕಟ್ಲರಿ ಸಾಮಗ್ರಿಗಳನ್ನು ಖರೀದಿಸಲು ಯೋಜಿಸಿದ್ದರು. ಈ ವ್ಯವಹಾರಕ್ಕಾಗಿ ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿಸಬೇಕಾಗಿದ್ದ ಹಿನ್ನೆಲೆಯಲ್ಲಿ ಸ್ನೇಹಿತ ಉಮೇಶ್ ಸಲಹೆ ಮೇರೆಗೆ Crypto India F2F ಎಂಬ ವಾಟ್ಸಾಪ್ ಗುಂಪಿಗೆ ಸೇರಿದ್ದರು.
ಗುಂಪಿನ ಮೂಲಕ ಪರಿಚಯವಾದ ಪ್ರಮುಖ ಆರೋಪಿ ಮುಜಾಮಿಲ್, ಮೊದಲು 2.5 ಲಕ್ಷವನ್ನು ಯಶಸ್ವಿಯಾಗಿ ಕ್ರಿಪ್ಟೋ ಕರೆನ್ಸಿಯಾಗಿ ಎಕ್ಸ್‌ಚೇಂಜ್ ಮಾಡಿ ವಿಶ್ವಾಸ್ ಅವರಲ್ಲಿ ನಂಬಿಕೆ ಮೂಡಿಸಿದ್ದ. ಬಳಿಕ ಜೂನ್ 9ರಂದು 17.64 ಲಕ್ಷ ಹಣವನ್ನು ಯುಎಸ್‌ಡಿಟಿಯಾಗಿ ಪರಿವರ್ತಿಸಿಕೊಡುವುದಾಗಿ ಹೇಳಿ ಸಂಜಯನಗರದ ಕಲ್ಪನಾ ಚಾವ್ಲಾ ರಸ್ತೆಗೆ ಹಣದೊಂದಿಗೆ ಬರಲು ಸೂಚಿಸಿದ್ದ.
ವಿಶ್ವಾಸ್ ತಮ್ಮ ಸ್ನೇಹಿತ ಉಮೇಶ್ ಜೊತೆಗೆ ಕಾರಿನಲ್ಲಿ 10 ಲಕ್ಷ ಹಾಗೂ ಉಳಿದ ಹಣವನ್ನು ತಮ್ಮನ ಮೂಲಕ ಬೈಕ್‌ನಲ್ಲಿ ಕಳುಹಿಸಿದ್ದರು. ಸ್ಥಳಕ್ಕೆ ಬಂದ ಮುಜಾಮಿಲ್ ಕಾರಿನೊಳಗೆ ಕುಳಿತುಕೊಳ್ಳದೆ ಬಾಗಿಲು ತೆರೆದು ನಿಂತಿದ್ದ. ಕೆಲವೇ ಕ್ಷಣಗಳಲ್ಲಿ ಐದಾರು ಬೈಕ್‌ಗಳಲ್ಲಿ ಬಂದ ಸುಮಾರು 12 ಮಂದಿ ಆರೋಪಿಗಳು ಕಾರನ್ನು ಅಡ್ಡಗಟ್ಟಿ, ವಿಶ್ವಾಸ್ ಮೇಲೆ ಹಲ್ಲೆ ನಡೆಸಿ 17.64 ಲಕ್ಷ ನಗದು ದೋಚಿ ಪರಾರಿಯಾಗಿದ್ದರು.
ಈ ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸಂಜಯನಗರ ಪೊಲೀಸರು, ಜೆ.ಸಿ.ನಗರ, ಆರ್.ಟಿ.ನಗರ ಹಾಗೂ ಹೆಬ್ಬಾಳ ಠಾಣೆಗಳ ವಿಶೇಷ ತಂಡಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿ ಎಲ್ಲಾ 12 ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ ಪ್ರಮುಖ ಆರೋಪಿಗಳು ಕ್ರಿಪ್ಟೋ ಕರೆನ್ಸಿ ಸಂಬಂಧಿತ ವಾಟ್ಸಾಪ್ ಗುಂಪುಗಳ ಮೂಲಕ ಪರಿಚಯ ಬೆಳೆಸಿ ದರೋಡೆಗೆ ಸಂಚು ರೂಪಿಸಿದ್ದರೆಂಬ ಮಾಹಿತಿ ಬಹಿರಂಗವಾಗಿದೆ.
ಬಂಧಿತರಲ್ಲಿ ವಸೀಂ ಖಾನ್ ವಿರುದ್ಧ ಈಗಾಗಲೇ 13ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಲಿಯಾಕತ್ ಶರೀಫ್, ರೆಹಾನ್ ಹಾಗೂ ಕರೀಂ ಖಾನ್ ವಿರುದ್ಧವೂ ಹಲವು ಪ್ರಕರಣಗಳಿರುವುದಾಗಿ ಗೊತ್ತಾಗಿದೆ. ವಾಟ್ಸಾಪ್ ಗುಂಪಿನ ಚಟುವಟಿಕೆಗಳು, ಕ್ರಿಪ್ಟೋ ವ್ಯವಹಾರದ ಹಿನ್ನೆಲೆ ಹಾಗೂ ದೂರುದಾರರ ಹಣದ ಮೂಲ ಸೇರಿದಂತೆ ಪ್ರಕರಣದ ಎಲ್ಲಾ ಆಯಾಮಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಬ್ರಿಟಿಷ್ ಪಾಸ್‌ಪೋರ್ಟ್‌ನಿಂದ ಹೊಸ ಅವಕಾಶ : ನಾಟಿಂಗ್‌ಹ್ಯಾಮ್‌ಶೈರ್ ತಂಡ ಸೇರಿದ ಮೊಹಮ್ಮದ್ ಅಮೀರ್


















