ಬೆಂಗಳೂರು : ರಾಜಾಜಿನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ತಲೆ ಮೇಲೆ ರಸ್ತೆ ಬದಿಯ ಒಣಗಿದ ಮರದ ದೊಡ್ಡ ಕೊಂಬೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಕೋಮಾಗೆ ಜಾರಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಭೀಕರ ಘಟನೆ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬುಧವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 52 ವರ್ಷದ ಸತೀಶ್ ಅವರು ಫೈನಾನ್ಸ್ ಕಲೆಕ್ಷನ್ ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ರಾಜಾಜಿನಗರದ ರಾಮಮಂದಿರದ ರಸ್ತೆಯ ಮೂಲಕ ತೆರಳುತ್ತಿದ್ದರು. ಇದೇ ವೇಳೆ ಗಾಳಿಯ ಹೊಡೆತಕ್ಕೆ ರಸ್ತೆ ಬದಿಯ ಒಣಗಿದ ಮರದ ದೊಡ್ಡ ಕೊಂಬೆ ಮುರಿದು ನೇರವಾಗಿ ಅವರ ತಲೆ ಮೇಲೆ ಬಿದ್ದಿದೆ. ಕೊಂಬೆಯ ಹೊಡೆತಕ್ಕೆ ಸತೀಶ್ ಅವರು ಬೈಕ್ ಸಮೇತ ರಸ್ತೆಗೆ ಉರುಳಿ ಬಿದ್ದಿದ್ದಾರೆ.
ಘಟನೆಯ ತಕ್ಷಣವೇ ಸ್ಥಳೀಯ ನಿವಾಸಿಗಳು ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯರು ತಕ್ಷಣ ತಲೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಚಿಕಿತ್ಸೆ ಆರಂಭಿಸಿದ ವೈದ್ಯರು ಮೊದಲ 48 ಗಂಟೆಗಳು ಅತ್ಯಂತ ನಿರ್ಣಾಯಕವಾಗಿದ್ದು, ಈ ಹಂತದಲ್ಲಿ ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಕುಟುಂಬಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.
ಸತೀಶ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ತೀವ್ರ ಆತಂಕದಲ್ಲಿದ್ದು, ಆಸ್ಪತ್ರೆಯಲ್ಲೇ ಕಣ್ಣೀರಿನಲ್ಲಿ ದಿನ ಕಳೆಯುತ್ತಿದ್ದಾರೆ. ಅವರ ಆರೋಗ್ಯ ಸುಧಾರಿಸಲಿ ಎಂದು ಬಂಧು-ಬಳಗ ಹಾಗೂ ಸ್ನೇಹಿತರು ಪ್ರಾರ್ಥಿಸುತ್ತಿದ್ದಾರೆ.
ಈ ಘಟನೆ ಬಳಿಕ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿರುವ ಹಲವು ಮರಗಳ ಕೊಂಬೆಗಳು ಒಣಗಿ ಅಪಾಯಕಾರಿಯಾಗಿ ನಿಂತಿದ್ದು, ಅವುಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣವೇ ಇಂತಹ ದುರ್ಘಟನೆ ಸಂಭವಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ವಿದ್ಯುತ್ ಖಾಸಗೀಕರಣ ವಿರೋಧಿಸಿ ಸಿಪಿಐಎಂ ಪ್ರತಿಭಟನೆ – ಟಾಟಾ ಪವರ್‌ಗೆ ಪರವಾನಗಿ ನೀಡದಂತೆ ಆಗ್ರಹ!



















