ಬೆಂಗಳೂರು, ಮಾರ್ಚ್ 10: ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಊಟ-ತಿಂಡಿ ದೊರಕುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದ ಇಂದಿರಾ ಕ್ಯಾಂಟಿನ್ ಯೋಜನೆಗೆ ಇದೀಗ ಐ-ಟೆಕ್ ಸ್ಪರ್ಶ ನೀಡಲು ಜಿಬಿಎ ಮುಂದಾಗಿದೆ.
ನಗರದ ಹಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಕೆ ಗುತ್ತಿಗೆದಾರರು ನಿಜವಾದ ಮಾರಾಟಕ್ಕಿಂತ ಹೆಚ್ಚು ಸಂಖ್ಯೆಯನ್ನು ತೋರಿಸಿ ಸುಳ್ಳು ಲೆಕ್ಕ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಕೆಲ ಕ್ಯಾಂಟೀನ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಊಟ-ತಿಂಡಿ ವಿತರಣೆ ನಡೆದರೂ ಜಿಬಿಎಗೆ ಹೆಚ್ಚಿನ ಸಂಖ್ಯೆಯನ್ನು ತೋರಿಸಿ ಬಿಲ್ ಸಲ್ಲಿಸಿ ಹಣ ಪಡೆಯುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಪ್ರತಿದಿನ ಎಷ್ಟು ಮಂದಿ ಊಟ-ತಿಂಡಿ ಪಡೆಯುತ್ತಿದ್ದಾರೆ ಎಂಬುದನ್ನು ಗಮನಿಸಲು ಕ್ಯಾಂಟೀನ್‌ಗಳಲ್ಲಿ ಮಾರ್ಷಲ್‌ಗಳನ್ನು ನೇಮಕ ಮಾಡಲಾಗಿತ್ತು. ಆದರೆ ಕೆಲವು ಕಡೆ ಮಾರ್ಷಲ್‌ಗಳೇ ಗುತ್ತಿಗೆದಾರರ ಜೊತೆ ಕೈಜೋಡಿಸಿ ಸರಿಯಾದ ಲೆಕ್ಕ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಈ ಹಿನ್ನೆಲೆ ಮಾರ್ಷಲ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಇದೀಗ ತಂತ್ರಜ್ಞಾನ ಬಳಕೆ ಮಾಡುವ ಬಗ್ಗೆ ಜಿಬಿಎ ಚಿಂತನೆ ನಡೆಸುತ್ತಿದೆ.
ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಿ ಪ್ರತಿದಿನ ಎಷ್ಟು ಮಂದಿ ಊಟ-ತಿಂಡಿ ಪಡೆಯುತ್ತಾರೆ ಎಂಬುದನ್ನು ಸ್ವಯಂಚಾಲಿತವಾಗಿ ದಾಖಲಿಸುವ ವ್ಯವಸ್ಥೆ ತರಲು ಯೋಜನೆ ರೂಪಿಸಲಾಗಿದೆ. ಎಐ ಕ್ಯಾಮೆರಾಗಳಿಂದ ದೊರೆಯುವ ಮಾಹಿತಿಯ ಆಧಾರದ ಮೇಲೆ ಗುತ್ತಿಗೆದಾರರಿಗೆ ಬಿಲ್ ಮೊತ್ತ ಪಾವತಿಸುವ ಹೊಸ ವ್ಯವಸ್ಥೆ ಜಾರಿಗೆ ತರಲು ಜಿಬಿಎ ಯೋಜಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಜೊತೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾರ್ಷಲ್ ವ್ಯವಸ್ಥೆಯನ್ನು ಹಂತ ಹಂತವಾಗಿ ತೆಗೆದುಹಾಕಲು ಜಿಬಿಎ ಮುಖ್ಯ ಆಯುಕ್ತರು ಎಲ್ಲಾ ನಗರಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಮಾರ್ಷಲ್‌ಗಳನ್ನು ಕಸ ವಿಲೇವಾರಿ ಹಾಗೂ ಇತರೆ ಕೆಲಸಗಳಿಗೆ ನಿಯೋಜಿಸುವಂತೆ ಸೂಚಿಸಲಾಗಿದೆ.
ಈ ವ್ಯವಸ್ಥೆ ಜಾರಿಗೆ ಬಂದರೆ ಸುಳ್ಳು ಲೆಕ್ಕಗಳಿಗೆ ಕಡಿವಾಣ ಬೀಳುವ ಜೊತೆಗೆ ಸರ್ಕಾರದ ಹಣದ ದುರುಪಯೋಗ ತಡೆಯಲು ಸಹಾಯಕವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಇದನ್ನೂ ಓದಿ : ಯುದ್ಧದ ಎಫೆಕ್ಟ್.. ಇಂದಿನಿಂದ ಹೋಟೆಲ್‌ಗಳು ಬಂದ್..!


















