ಮೆಕ್ಸಿಕೋ ಸಿಟಿ : ಅಮೆರಿಕ ಸೇರಿದಂತೆ ಹಲವು ದೇಶಗಳ ಡ್ರಗ್ಸ್ ಸಾಮ್ರಾಜ್ಯವನ್ನು ಆಳುತ್ತಿದ್ದ ಮೆಕ್ಸಿಕೋದ ‘ಜಲಿಸ್ಕೋ ನ್ಯೂ ಜನರೇಷನ್ ಕಾರ್ಟೆಲ್’ (CJNG) ಕುಖ್ಯಾತ ನಾಯಕ ಹಾಗೂ ಅಮೆರಿಕದ ಮೋಸ್ಟ್ ವಾಂಟೆಡ್ ಅಪರಾಧಿಗಳಲ್ಲಿ ಒಬ್ಬ ನೆಮೆಸಿಯೊ ಒಸೆಗುರಾ ಸೆರ್ವಾಂಟೆಸ್ ಅಲಿಯಾಸ್ ‘ಎಲ್ ಮೆಂಚೊ’ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಲು ಕಾರಣವಾಗಿದ್ದು ಯಾರು ಗೊತ್ತೇ? ಬೇರೆ ಯಾರೂ ಅಲ್ಲ ಅವರ ಪ್ರೇಯಸಿ!
ಹೌದು, ಎಲ್ ಮೆಂಚೋನನ್ನು ಪತ್ತೆಹಚ್ಚಲು ಮೆಕ್ಸಿಕೋ ಮತ್ತು ಅಮೆರಿಕದ ಗುಪ್ತಚರ ಇಲಾಖೆಗಳು ಹಲವು ವರ್ಷಗಳಿಂದ ಬಲೆ ಹೆಣೆದಿದ್ದವು. ಆದರೆ ಆತ ಪ್ರತಿ ಬಾರಿಯೂ ತಪ್ಪಿಸಿಕೊಳ್ಳುತ್ತಿದ್ದ. ಆದರೆ, ಈಗ ಆತನ ಪ್ರಿಯತಮೆಯ ಆಪ್ತ ಸಹಾಯಕನ ಮೇಲೆ ಇರಿಸಿದ್ದ ನಿರಂತರ ಕಣ್ಗಾವಲು ಭದ್ರತಾ ಪಡೆಗಳಿಗೆ ಬಹುದೊಡ್ಡ ಸುಳಿವು ನೀಡಿತು. ಶುಕ್ರವಾರ ಆಕೆಯನ್ನು ಜಲಿಸ್ಕೋದ ತಪಲ್ಪಾಗೆ ಕರೆದೊಯ್ಯಲಾಗಿತ್ತು. ಈ ಖಚಿತ ಮಾಹಿತಿಯನ್ನು ಅಮೆರಿಕದ ಗುಪ್ತಚರ ಇಲಾಖೆ ಮೆಕ್ಸಿಕೋ ಸೇನೆಗೆ ರವಾನಿಸಿತ್ತು. ಪ್ರಿಯತಮೆ ಆತನೊಂದಿಗೆ ರಾತ್ರಿ ಕಳೆದು ಹಿಂತಿರುಗಿದ ಬಳಿಕ, ಎಲ್ ಮೆಂಚೊ ತನ್ನ ಬೆಂಗಾವಲು ಪಡೆಯೊಂದಿಗೆ ಅಲ್ಲೇ ಇರುವ ಬಗ್ಗೆ ಖಚಿತಪಡಿಸಿಕೊಂಡ ವಿಶೇಷ ಪಡೆಗಳು ಕಾರ್ಯಾಚರಣೆಯನ್ನು ಅಂತಿಮಗೊಳಿಸಿದವು.
ಭೀಕರ ಗುಂಡಿನ ಚಕಮಕಿಗೆ ಅಡಗಿ ಕುಳಿತಿದ್ದ ಡಾನ್ ಬಲಿ
ಭಾನುವಾರ ಮುಂಜಾನೆ ಮೆಕ್ಸಿಕನ್ ಸೇನೆ ಮತ್ತು ನ್ಯಾಷನಲ್ ಗಾರ್ಡ್ ತಪಲ್ಪಾ ಪ್ರದೇಶವನ್ನು ಸುತ್ತುವರಿದವು. ಆರು ಹೆಲಿಕಾಪ್ಟರ್‌ಗಳು ಮತ್ತು ವಾಯುಪಡೆಯ ಬೆಂಬಲದೊಂದಿಗೆ ಈ ಬೃಹತ್ ಕಾರ್ಯಾಚರಣೆ ಶುರುವಾಯಿತು. ಸೇನೆ ಮುನ್ನುಗ್ಗುತ್ತಿದ್ದಂತೆ, ಎಲ್ ಮೆಂಚೊ ತನ್ನ ಇಬ್ಬರು ಅಂಗರಕ್ಷಕರೊಂದಿಗೆ ಕಾಡಿನ ಪೊದೆಗಳಲ್ಲಿ ಅಡಗಿ ಕುಳಿತು ತಪ್ಪಿಸಿಕೊಳ್ಳಲು ಯತ್ನಿಸಿದ. ಈ ವೇಳೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಎಲ್ ಮೆಂಚೊ ಮತ್ತು ಆತನ ಇಬ್ಬರು ಅಂಗರಕ್ಷಕರು ತೀವ್ರವಾಗಿ ಗಾಯಗೊಂಡರು. ಅವರನ್ನು ವಶಕ್ಕೆ ಪಡೆದು ತುರ್ತು ಚಿಕಿತ್ಸೆಗಾಗಿ ಮೆಕ್ಸಿಕೋ ಸಿಟಿಗೆ ಹೆಲಿಕಾಪ್ಟರ್ ಮೂಲಕ ರವಾನಿಸುವ ಮಾರ್ಗಮಧ್ಯೆಯೇ ಮೂವರೂ ಸಾವನ್ನಪ್ಪಿದ್ದಾರೆ ಎಂದು ಮೆಕ್ಸಿಕನ್ ರಕ್ಷಣಾ ಕಾರ್ಯದರ್ಶಿ ಜನರಲ್ ರಿಕಾರ್ಡೊ ಟ್ರೆವಿಲ್ಲಾ ಖಚಿತಪಡಿಸಿದ್ದಾರೆ. ಇದೇ ಘಟನಾ ಸ್ಥಳದಲ್ಲಿ ಕಾರ್ಟೆಲ್‌ನ ಎಂಟು ಬಂದೂಕುಧಾರಿಗಳು ಕೂಡ ಹತರಾದರು. ಈ ಇಡೀ ಕಾರ್ಯಾಚರಣೆಯ ಪ್ರತಿಯೊಂದು ಹಂತದ ಮಾಹಿತಿಯನ್ನು ಉತ್ತರ ಮೆಕ್ಸಿಕೋ ಪ್ರವಾಸದಲ್ಲಿದ್ದ ಅಧ್ಯಕ್ಷೆ ಕ್ಲೌಡಿಯಾ ಶೈನ್‌ಬಾಮ್ ಅವರಿಗೆ ರವಾನಿಸಲಾಗುತ್ತಿತ್ತು.
ಸೈನಿಕರ ಹತ್ಯೆಗೆ ಬಹುಮಾನ ಘೋಷಿಸಿದ್ದ ಬಲಗೈ ಬಂಟನ ಅಂತ್ಯ
ಎಲ್ ಮೆಂಚೊನ ಸಾವಿನ ಬಳಿಕ ಆತನ ಬೆಂಬಲಿಗರು ತೀವ್ರ ಹಿಂಸಾಚಾರಕ್ಕೆ ಇಳಿದರು. ತಪಲ್ಪಾದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿದ್ದ, ಎಲ್ ಮೆಂಚೊನ ಬಲಗೈ ಬಂಟ ಎನ್ನಲಾದ ‘ಎಲ್ ತುಲಿ’ ಎಂಬಾತ ಪ್ರತಿಯೊಬ್ಬ ಸೈನಿಕನ ಹತ್ಯೆಗೆ 20,000 ಪೆಸೊ (ಸುಮಾರು 1,000 ಡಾಲರ್) ಬಹುಮಾನವನ್ನು ಘೋಷಿಸಿದ್ದ. ರಾಜ್ಯಾದ್ಯಂತ ರಸ್ತೆ ತಡೆ, ವಾಹನಗಳಿಗೆ ಬೆಂಕಿ ಹಚ್ಚುವಿಕೆ ಮತ್ತು ಸರ್ಕಾರಿ ಕಚೇರಿಗಳ ಮೇಲಿನ ದಾಳಿಗಳ ರೂವಾರಿ ಈತನೇ ಆಗಿದ್ದ. ಆದರೆ, ಕಾರ್ಯಾಚರಣೆ ಮುಂದುವರಿಸಿದ ಪ್ಯಾರಾಟ್ರೂಪರ್ ರೈಫಲ್ ಬ್ರಿಗೇಡ್ ಪಡೆಗಳು ಎಲ್ ತುಲಿಯನ್ನು ಕೂಡ ಭೀಕರ ಗುಂಡಿನ ಚಕಮಕಿಯಲ್ಲಿ ಹತ್ಯೆಗೈದಿವೆ. ಆತನ ಬಳಿಯಿದ್ದ ಸುಮಾರು 1.4 ದಶಲಕ್ಷ ಡಾಲರ್ ಮೌಲ್ಯದ ನಗದು ಹಾಗೂ ಅಪಾರ ಪ್ರಮಾಣದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಲಿಸ್ಕೋ ಈಗ ಬೂದಿಮುಚ್ಚಿದ ಕೆಂಡ
ಡಾನ್ ಹತ್ಯೆಯ ಪ್ರತಿಕಾರವಾಗಿ ಮೆಕ್ಸಿಕೋದ ಹಲವು ರಾಜ್ಯಗಳಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ಭದ್ರತಾ ಕಾರ್ಯದರ್ಶಿ ಒಮರ್ ಗಾರ್ಸಿಯಾ ಹರ್ಫುಚ್ ಅವರ ಪ್ರಕಾರ, ಜಲಿಸ್ಕೋ ಒಂದರಲ್ಲೇ 25 ನ್ಯಾಷನಲ್ ಗಾರ್ಡ್ ಸದಸ್ಯರು, ಓರ್ವ ಕಾರಾಗೃಹ ಅಧಿಕಾರಿ, ಒಬ್ಬ ಸರ್ಕಾರಿ ನೌಕರ ಸೇರಿದಂತೆ ಹಲವು ಅಮಾಯಕರು ಹಾಗೂ 30ಕ್ಕೂ ಹೆಚ್ಚು ಶಂಕಿತ ಅಪರಾಧಿಗಳು ಬಲಿಯಾಗಿದ್ದಾರೆ. ಒಟ್ಟಾರೆಯಾಗಿ ಈ ಕಾರ್ಯಾಚರಣೆ ಹಾಗೂ ತರುವಾಯದ ಹಿಂಸಾಚಾರದಲ್ಲಿ 70ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೆರೆಯ ಮೈಕೋಕಾನ್ ರಾಜ್ಯದಲ್ಲೂ ಹಿಂಸಾಚಾರ ಮುಂದುವರೆದಿದ್ದು, ನಾಲ್ವರು ಬಂದೂಕುಧಾರಿಗಳು ಹತರಾಗಿದ್ದಾರೆ ಹಾಗೂ 15 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಅನ್ಯಕೋಮಿನ ಬಾಲಕರಿಂದ SSLC ವಿದ್ಯಾರ್ಥಿಯ ಹತ್ಯೆ | ಶಿವಮೊಗ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್



















