ಟೆಕ್ಸಾಸ್ : ಅಮೆರಿಕದ ಟೆಕ್ಸಾಸ್ ರಾಜ್ಯದ ಶುಗರ್ ಲ್ಯಾಂಡ್‌ನಲ್ಲಿ ಸ್ಥಾಪಿಸಲಾಗಿರುವ 90 ಅಡಿ ಎತ್ತರದ ಹನುಮಂತನ ಪ್ರತಿಮೆಯು ಇದೀಗ ವಿವಾದದ ಕೇಂದ್ರಬಿಂದುವಾಗಿವೆ. ಆಂಜನೇಯನ ಈ ಪ್ರತಿಮೆಯ ಕುರಿತು ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ನಾಯಕರೊಬ್ಬರು ನೀಡಿರುವ ಹೇಳಿಕೆ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಹಿಂದೂ ದೇವರ ಈ ಬೃಹತ್ ಪ್ರತಿಮೆಯನ್ನು ‘ವಿದೇಶಿ ಆಕ್ರಮಣ’ ಎಂದು ಬಣ್ಣಿಸಿರುವ ಮಗಾ (MAGA) ಕಾರ್ಯಕರ್ತ ಕಾರ್ಲೋಸ್ ಟುರ್ಸಿಯೊಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಡಲ್ಲಾಸ್-ಫೋರ್ಟ್ ವರ್ತ್ ಪ್ರದೇಶದ ರಿಪಬ್ಲಿಕನ್ ನಾಯಕ ಕಾರ್ಲೋಸ್ ಟುರ್ಸಿಯೊಸ್, ಶ್ರೀ ಅಷ್ಟಲಕ್ಷ್ಮಿ ದೇವಾಲಯದಲ್ಲಿರುವ ಈ ‘ಸ್ಟ್ಯಾಚು ಆಫ್ ಯೂನಿಯನ್’ ಪ್ರತಿಮೆಯ ವಿಡಿಯೋವನ್ನು ಹಂಚಿಕೊಂಡಿದ್ದು, “ಇದು ಇಸ್ಲಾಮಾಬಾದ್ ಅಥವಾ ನವದೆಹಲಿಯಲ್ಲ, ಇದು ಟೆಕ್ಸಾಸ್. ಥರ್ಡ್ ವರ್ಲ್ಡ್‌ನ ವಿದೇಶಿಯರು ಅಮೆರಿಕವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದು ಯಾಕೆ ಅಮೆರಿಕದ ಮೂರನೇ ಅತಿ ಎತ್ತರದ ಪ್ರತಿಮೆ ಆಗಿರಬೇಕು? ಈ ಆಕ್ರಮಣವನ್ನು ನಿಲ್ಲಿಸಿ,” ಎಂದು ಅವರು ಎಕ್ಸ್ (X) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಹೇಳಿಕೆಯು ಅನಿವಾಸಿ ಭಾರತೀಯರು ಮತ್ತು ಹಿಂದೂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.
ಅಮೆರಿಕದ ಮೂರನೇ ಅತಿ ಎತ್ತರದ ಪ್ರತಿಮೆ
2024ರಲ್ಲಿ ಅನಾವರಣಗೊಂಡ ಈ ಪಂಚಲೋಹ ಅಭಯ ಹನುಮಾನ್ ಪ್ರತಿಮೆಯು ಅಮೆರಿಕದ ಅತಿ ಎತ್ತರದ ಹಿಂದೂ ಸ್ಮಾರಕಗಳಲ್ಲಿ ಒಂದಾಗಿದೆ. ಶ್ರೀ ಚಿನ್ನಜೀಯರ್ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡ ಈ ಪ್ರತಿಮೆಯು ಅಮೆರಿಕದ ಒಟ್ಟಾರೆ ಪ್ರತಿಮೆಗಳ ಪೈಕಿ ಎತ್ತರದಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಪ್ರತಿಮೆಯು ಶಕ್ತಿ, ಭಕ್ತಿ ಮತ್ತು ಶಾಂತಿಯ ಸಂಕೇತವಾಗಿದೆ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಕೆಲವು ಬಲಪಂಥೀಯ ನಾಯಕರು ಇದನ್ನು ಸಾಂಸ್ಕೃತಿಕ ಬೆದರಿಕೆ ಎಂಬಂತೆ ಬಿಂಬಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ನೆಟ್ಟಿಗರಿಂದ ತರಾಟೆ
ಟುರ್ಸಿಯೊಸ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕಾರ್ತಿಕ್ ಗಡ ಎಂಬವರು ಅಂಕಿಅಂಶಗಳ ಸಮೇತ ಪ್ರತಿಕ್ರಿಯಿಸಿ, “ಅಮೆರಿಕದಲ್ಲಿ ಸ್ಪ್ಯಾನಿಷ್ ಮಾತನಾಡುವ 41 ದಶಲಕ್ಷ ಮನೆಗಳಿವೆ, ಆದರೆ ಭಾರತೀಯ ಭಾಷೆಗಳು ಮೊದಲ ಹತ್ತರಲ್ಲಿಯೂ ಇಲ್ಲ. ಭಾರತೀಯ ಮೂಲದವರು ಅಮೆರಿಕದ ಸಂಸ್ಕೃತಿಗೆ ಉತ್ತಮವಾಗಿ ಹೊಂದಿಕೊಂಡಿದ್ದಾರೆ. ಮೊದಲು ಅಮೆರಿಕದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ,” ಎಂದು ಟಾಂಗ್ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರಾದ ಅಡೆಲ್ಲೆ ನಜಾರಿಯನ್ ಅವರು, “ಹಿಂದೂ ಧರ್ಮದಲ್ಲಿ ಮತಾಂತರಕ್ಕೆ ಅವಕಾಶವಿಲ್ಲ, ಹೀಗಿರುವಾಗ ಹಿಂದೂಗಳು ಪಾಶ್ಚಿಮಾತ್ಯ ನಾಗರಿಕತೆಗೆ ಹೇಗೆ ಬೆದರಿಕೆಯಾಗುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆಯೂ ವಿರೋಧ
ಹನುಮಂತನ ಪ್ರತಿಮೆಯ ವಿರುದ್ಧ ವಿವಾದ ಉಂಟಾಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ಟೆಕ್ಸಾಸ್‌ನ ಮತ್ತೊಬ್ಬ ರಿಪಬ್ಲಿಕನ್ ನಾಯಕ ಅಲೆಕ್ಸಾಂಡರ್ ಡಂಕನ್ ಅವರು ಈ ಪ್ರತಿಮೆಯನ್ನು ವಿರೋಧಿಸಿದ್ದರು. “ಅಮೆರಿಕ ಒಂದು ಕ್ರಿಶ್ಚಿಯನ್ ರಾಷ್ಟ್ರ, ಇಲ್ಲಿ ಹಿಂದೂ ದೇವರ ಪ್ರತಿಮೆಗಳಿಗೆ ಏಕೆ ಅವಕಾಶ ನೀಡಬೇಕು?” ಎಂದು ಅವರು ಪ್ರಶ್ನಿಸಿದ್ದರು.
ಇದನ್ನೂ ಓದಿ : ಇದು ಚೀನಾದ್ದಲ್ಲ, ಬೆಂಗಳೂರು ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸಿದ ಭಾರತದ ಅತ್ಯಂತ ಶಕ್ತಿಶಾಲಿ ‘ರೋಬೋ ಡಾಗ್’ ಪರಮ್!



















