ಹೈದರಾಬಾದ್ : ತೆಲುಗು ಚಿತ್ರರಂಗದ ಜನಪ್ರಿಯ ನಟ ವಿಜಯ್ ದೇವರಕೊಂಡ ಹಾಗೂ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಅವರ ವಿವಾಹದ ದಿನಾಂಕ ಫಿಕ್ಸ್ ಆಗಿದ್ದು, ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 24ರಿಂದಲೇ ವಿವಾಹದ ಸಂಭ್ರಮಗಳು ಆರಂಭವಾಗಲಿದ್ದು, 26ರಂದು ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಈ ಮದುವೆಯು ಅತ್ಯಂತ ಖಾಸಗಿ ಕಾರ್ಯಕ್ರಮವಾಗಿದ್ದು, ಸೀಮಿತ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ಇತ್ತೀಚಿನ ಸೆಲೆಬ್ರಿಟಿ ಮದುವೆಗಳ ಟ್ರೆಂಡ್‌ನಂತೆ ವಿಜಯ್ ಮತ್ತು ರಶ್ಮಿಕಾ ಕೂಡ ತಮ್ಮ ಮದುವೆಯ ಫೋಟೋ ಮತ್ತು ವಿಡಿಯೋಗಳು ಸೋರಿಕೆಯಾಗದಂತೆ ತಡೆಯಲು ಕಟ್ಟುನಿಟ್ಟಿನ ‘ನೋ-ಫೋನ್ ಪಾಲಿಸಿ’ ಜಾರಿಗೆ ತಂದಿದ್ದಾರೆ. ಅದರಂತೆ, ಅತಿಥಿಗಳಿಗೆ ಮದುವೆ ಸಮಾರಂಭ ನಡೆಯುವ ಸ್ಥಳಕ್ಕೆ ಫೋನ್ ತರಲು ಅವಕಾಶವಿಲ್ಲ. ಅಷ್ಟೇ ಅಲ್ಲ, ಮದುವೆಯ ಚಿತ್ರೀಕರಣ ಮಾಡುವ ತಂಡದವರೂ ಕೂಡ ಗೌಪ್ಯತೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ, ವಿವಾಹ ಸಮಾರಂಕ್ಕೆ ಚಿತ್ರರಂಗದ ಯಾವುದೇ ಸಹೋದ್ಯೋಗಿಗಳನ್ನು ಆಹ್ವಾನಿಸದೆ, ಕೇವಲ ಕುಟುಂಬಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ.
ಗಮನ ಸೆಳೆದ ದಂಪತಿಯ ಹ್ಯಾಂಡ್‌ರಿಟನ್ ನೋಟ್
ಸರಳತೆ ಮತ್ತು ಸಂಪ್ರದಾಯಕ್ಕೆ ಮೊರೆ ಹೋಗಿರುವ ಈ ಜೋಡಿ, ತಮ್ಮ ಆಪ್ತರಿಗೆ ಕೈಬರಹದ ಪತ್ರಗಳನ್ನು (Handwritten Notes) ಕಳುಹಿಸಿದ್ದಾರೆ. ಅದರಲ್ಲಿ ಯಾವುದೇ ಉಡುಗೊರೆಗಳನ್ನು ತರದೆ ಕೇವಲ ಹಾರೈಕೆಗಳನ್ನು ನೀಡುವಂತೆ ವಿನಂತಿಸಿದ್ದಾರೆ. ಈಗಾಗಲೇ ರಶ್ಮಿಕಾ ಮನೆಯಲ್ಲಿ ಅವರ ತಾಯಿಯ ಕಡೆಯ ಸಂಬಂಧಿಕರು ಒಂದು ಹಂತದ ವಿಧಿವಿಧಾನಗಳನ್ನು ಮುಗಿಸಿದ್ದರೆ, ವಿಜಯ್ ಮನೆಯಲ್ಲಿಯೂ ಸಂಪ್ರದಾಯದಂತೆ ಪೂರ್ವಭಾವಿ ವಿಧಿವಿಧಾನಗಳು ನಡೆದಿವೆ. ಮದುವೆಯ ನಂತರ ದಂಪತಿಗಳು ತಮ್ಮ ವೃತ್ತಿಜೀವನದಿಂದ ಒಂದು ತಿಂಗಳ ಕಾಲ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಹೈದರಾಬಾದ್‌ನಲ್ಲಿ ಅದ್ದೂರಿ ಆರತಕ್ಷತೆ
ಉದಯಪುರದಲ್ಲಿ ಮದುವೆ ಮುಗಿದ ನಂತರ, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಗಣ್ಯರು ಹಾಗೂ ಸ್ನೇಹಿತರಿಗಾಗಿ ಅದ್ಧೂರಿ ಔತಣಕೂಟವನ್ನು ಏರ್ಪಡಿಸಲಾಗಿದೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಚಿತ್ರಗಳ ಮೂಲಕ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಒಂದಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ಇಷ್ಟು ದಿನ ತಮ್ಮ ಪ್ರೇಮ ಜೀವನದ ಬಗ್ಗೆ ಗುಟ್ಟು ಕಾಯ್ದುಕೊಂಡಿದ್ದ ಈ ತಾರೆಯರು ಈಗ ಅಧಿಕೃತವಾಗಿ ದಾಂಪತ್ಯಕ್ಕೆ ಸಜ್ಜಾಗಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸಿಗರು ನಿಯತ್ತಿನ ನಾಯಿಗಳು, ಅವು ಯಜಮಾನನ ಋಣ ತೀರಿಸುತ್ತೆ | ಡಿ.ಕೆ ಸುರೇಶ್



















