ಬೆಂಗಳೂರು : ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ವರ್ಲ್ಡ್ ಸಿನಿಮಾ ‘ಟಾಕ್ಸಿಕ್’ಗೆ ಸೆನ್ಸಾರ್ ಮಂಡಳಿಯಿಂದ ಅಸ್ತು ಸಿಕ್ಕಿದೆ. ಬೆಂಗಳೂರಿನ ಪ್ರಾದೇಶಿಕ ಸೆನ್ಸಾರ್ ಕಚೇರಿಯಿಂದ ಚಿತ್ರಕ್ಕೆ ‘A’ ಸರ್ಟಿಫಿಕೇಟ್ ನೀಡಲಾಗಿದ್ದು, ಸಿನಿಮಾದಲ್ಲಿ ಒಟ್ಟು 10 ಕಟ್ಸ್ ಮಾಡುವಂತೆ ಸೂಚಿಸಲಾಗಿದೆ.
ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿರುವ ಬೆನ್ನಲ್ಲೇ ‘ಟಾಕ್ಸಿಕ್’ ಚಿತ್ರದ ಅವಧಿಯೂ ಬಹಿರಂಗವಾಗಿದೆ. ಸಿನಿಮಾ ಬರೋಬ್ಬರಿ 3 ಗಂಟೆ 14 ನಿಮಿಷ, ಅಂದರೆ 194 ನಿಮಿಷಗಳಷ್ಟು ಸುದೀರ್ಘವಾಗಿರಲಿದೆ. ದೀರ್ಘ ಅವಧಿಯ ಸಿನಿಮಾ ಎಂಬ ಕಾರಣಕ್ಕೂ ‘ಟಾಕ್ಸಿಕ್’ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.

ಇನ್ನು ಚಿತ್ರದ ಕಥೆಯ ಕುರಿತ ಕೆಲವು ಮಾಹಿತಿಯೂ ಹೊರಬಿದ್ದಿದ್ದು, ಗ್ಯಾಂಗ್‌ಸ್ಟರ್ ಸೇಡಿನ ಕಥೆಯನ್ನು ‘ಟಾಕ್ಸಿಕ್’ ಒಳಗೊಂಡಿದೆ ಎನ್ನಲಾಗಿದೆ. ಗೋವಾ ಹಿನ್ನೆಲೆಯಲ್ಲಿನ ಆಕ್ಷನ್ ಸನ್ನಿವೇಶಗಳು ಚಿತ್ರದಲ್ಲಿ ಪ್ರಮುಖವಾಗಿದ್ದು, ಯಶ್ ಪಾತ್ರವು ಹಿಂಸೆಯ ಹಾದಿಯನ್ನು ಹಿಡಿಯುವ ರೀತಿಯಲ್ಲಿ ಕಥೆ ಸಾಗಲಿದೆ ಎಂಬ ಮಾಹಿತಿ ಸದ್ಯಕ್ಕೆ ಗಮನ ಸೆಳೆಯುತ್ತಿದೆ.
ಆಕ್ಷನ್, ಹಿಂಸೆ ಮತ್ತು ಗ್ಯಾಂಗ್‌ಸ್ಟರ್ ಜಗತ್ತಿನ ಕಥಾಹಂದರ ಹೊಂದಿರುವ ‘ಟಾಕ್ಸಿಕ್’ನಲ್ಲಿ ಯಶ್ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್, ಟೀಸರ್ ಹಾಗೂ ಇತರೆ ಪ್ರಚಾರಗಳ ಮೂಲಕ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಿತ್ರತಂಡ, ಇದೀಗ ಸೆನ್ಸಾರ್ ಸರ್ಟಿಫಿಕೇಟ್ ಪಡೆದಿರುವುದನ್ನು ಅಧಿಕೃತವಾಗಿ ಘೋಷಿಸುವ ಹಂತದಲ್ಲಿದೆ.
A ಸರ್ಟಿಫಿಕೇಟ್, 10 ಕಟ್ಸ್ ಹಾಗೂ 194 ನಿಮಿಷಗಳ ಅವಧಿಯ ಮಾಹಿತಿ ಹೊರಬಂದಿರುವ ಹಿನ್ನೆಲೆಯಲ್ಲಿ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ. ವಿಶೇಷವಾಗಿ ಗೋವಾದಲ್ಲಿ ನಡೆಯುವ ಆಕ್ಷನ್ ಧಮಾಕಾ ಮತ್ತು ಗ್ಯಾಂಗ್‌ಸ್ಟರ್ ಸೇಡಿನ ಕಥೆ ‘ಟಾಕ್ಸಿಕ್’ನ ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆ ಇದೆ.
ಬಹುನಿರೀಕ್ಷಿತ ಈ ಸಿನಿಮಾ ಆಗಸ್ಟ್ 26ರಂದು ತೆರೆಗೆ ಬರಲು ಸಜ್ಜಾಗಿದೆ. ಯಶ್ ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಸಿನಿಪ್ರಿಯರು ಕೂಡ ‘ಟಾಕ್ಸಿಕ್’ಗಾಗಿ ಕಾತರದಿಂದ ಕಾಯುತ್ತಿದ್ದು, 194 ನಿಮಿಷಗಳ ಸುದೀರ್ಘ ಆಕ್ಷನ್ ಸಿನಿಮಾ ಪ್ರೇಕ್ಷಕರಿಗೆ ಯಾವ ರೀತಿಯ ಅನುಭವ ನೀಡಲಿದೆ ಎಂಬುದು ಚಿತ್ರ ಬಿಡುಗಡೆಯ ಬಳಿಕವಷ್ಟೇ ಗೊತ್ತಾಗಲಿದೆ.
ಇದನ್ನೂ ಓದಿ : ವಯಸ್ಸಿನ ಮಿತಿಯಿಲ್ಲದ ‘ಬಿಗ್ ಬಾಸ್-13’ ಅಗ್ನಿಪರೀಕ್ಷೆ..!



















