ನವದೆಹಲಿ: 2026-27ನೇ ಹಣಕಾಸು ವರ್ಷದ ಕೇಂದ್ರ ಬಜೆಟ್‌ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದು (ಫೆ.1) ಮಂಡಿಸಲಿದ್ದಾರೆ. ಪ್ರತಿ ಬಾರಿ ಭಾರತದ ವಿವಿಧ ಪ್ರದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ಸೀರೆಯುಡುವ ಅವರು ಈ ಬಾರಿ ತಮಿಳುನಾಡಿನ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ.
ಈ ಬಾರಿ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ ಒಂಬತ್ತನೇ ಬಜೆಟ್‌ನ್ನು ಮಂಡಿಸಲಿದ್ದಾರೆ. ಬಜೆಟ್ ವೇಳೆ ತಮಿಳುನಾಡಿನ ಪ್ರಾಚೀನ ನೇಯ್ಗೆ ಪರಂಪರೆಯನ್ನು ಗೌರವಿಸುವ ಸಲುವಾಗಿ ಕೈಯಿಂದ ನೇಯ್ದ ಕಾಂಜೀವರಂ ರೇಷ್ಮೆ ಸೀರೆಯನ್ನು ಉಟ್ಟುಕೊಂಡಿದ್ದಾರೆ. ನೇರಳೆ ಬಣ್ಣದ ಸೀರೆಯಲ್ಲಿ ಚಿನ್ನದ ಬಣ್ಣದ ಗೆರೆ ಹಾಗೂ ಕಾಫಿ ಬಣ್ಣದ ದಡಿಯನ್ನು ಹೊಂದಿರುವ ಕಾಂಜೀವರಂ ರೇಷ್ಮೆ ಸೀರೆಯನ್ನು ಆರಿಸಿಕೊಂಡಿದ್ದು, ಇದನ್ನು ತಮಿಳಿನಲ್ಲಿ `ಕಟ್ಟಂ’ ಎಂದು ಕರೆಯಲಾಗುತ್ತದೆ.
ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರತಿ ಬಾರಿಯಂತೆ ಈ ಬಾರಿಯೂ ಭಾರತದ ಸಾಂಪ್ರದಾಯಿಕ ಕೈಮಗ್ಗ ನೇಕಾರಿಕೆಯನ್ನು ಪ್ರೋತ್ಸಾಹಿಸಲು ಈ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಕೆನ್ನೇರಳೆ ಬಣ್ಣವು ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಪ್ರತಿನಿಧಿಸುತ್ತದೆ. ಇದು ಭಾರತದ ಆರ್ಥಿಕತೆಯ ಬಲವಾದ ಬೆಳವಣಿಗೆಯನ್ನು ಬಿಂಬಿಸುವ ಉದ್ದೇಶವನ್ನು ಹೊಂದಿದೆ ಎನ್ನಲಾಗುತ್ತಿದೆ.
ಪ್ರತಿ ಬಾರಿಯೂ ಬಜೆಟ್ ದಿನ ನಿರ್ಮಲಾ ಸೀತಾರಾಮನ್ ಅವರು ಧರಿಸುವ ಸೀರೆ ಟ್ರೆಂಡ್ ಆಗುತ್ತದೆ. ವಿಭಿನ್ನ ಸೀರೆಗಳನ್ನು ಉಟ್ಟುಕೊಂಡು ಬರುವ ಮೂಲಕ ನಿರ್ಮಲಾ ಅವರು ದೇಶದ ಜನತೆಯ ಗಮನ ಸೆಳೆಯುತ್ತಾರೆ.
ಇದನ್ನೂ ಓದಿ: ಸಾಕು ಕೇಂದ್ರದ ಅನ್ಯಾಯ, ಬೇಕು ಕರ್ನಾಟಕಕ್ಕೆ ನ್ಯಾಯ | ಕೇಂದ್ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಆಗ್ರಹ


















