ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರದೋಣಿ ಗ್ರಾಮ ಪಂಚಾಯಿತಿಯ BLO ಹಾಗೂ ಬಿಲ್ ಕಲೆಕ್ಟರ್ ಡಿ.ಆರ್. ರಾಜಪ್ಪ (57) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎಸ್‌ಐಆರ್ ಕಾರ್ಯದಲ್ಲಿ ನಿರತರಾಗಿದ್ದ ಅವರು, ದಿನವಿಡೀ ಮತದಾರರ ಮನೆ-ಮನೆಗೆ ತೆರಳಿ ಕೆಲಸ ನಿರ್ವಹಿಸಿದ ಬಳಿಕ ಅಸ್ವಸ್ಥಗೊಂಡಿದ್ದಾರೆ. ಮಾಹಿತಿಯ ಪ್ರಕಾರ, ರಾಜಪ್ಪ ಅವರು ದಿನಪೂರ್ತಿ ಮತದಾರರ ಮಾಹಿತಿ ಸಂಗ್ರಹಿಸಿ ಮನೆಗೆ ವಾಪಸ್ಸಾಗಿದ್ದರು. ಸಂಜೆ ಎಸ್‌ಐಆರ್‌ಗೆ ಸಂಬಂಧಿಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದ ವೇಳೆ ಕೆಲಸದ ಒತ್ತಡ ಮತ್ತು ಗಾಬರಿಯಿಂದ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.
ರಾತ್ರಿ ಸುಮಾರು 11 ಗಂಟೆಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಅವರನ್ನು ಮೃತರೆಂದು ಘೋಷಿಸಿದ್ದಾರೆ.
ರಾಜಪ್ಪ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಆರ್. ಪ್ರಕಾಶ್ ಅವರು ಮೃತರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ. ಮೃತರ ಕುಟುಂಬಕ್ಕೆ ಧನಸಹಾಯ ನೀಡುವುದಾಗಿ ಹಾಗೂ ಅವರ ಮಗನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಕೊಲೆ ಕೇಸ್ : ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ!



















