ನವದೆಹಲಿ: ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಇತ್ತೀಚಿನ ಭಾರತ ಭೇಟಿಯು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯ ಸಮೀಕರಣಗಳಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಭಾರತದೊಂದಿಗೆ ಆಪ್ತತೆ ಹೆಚ್ಚಿಸಿಕೊಳ್ಳುತ್ತಿರುವ ಯುಎಇ, ಅತ್ತ ಪಾಕಿಸ್ತಾನಕ್ಕೆ ದೊಡ್ಡ ಆಘಾತ ನೀಡಿದೆ. ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಸಂಬಂಧಿಸಿದ ಒಪ್ಪಂದದಿಂದ ಯುಎಇ ಅಧಿಕೃತವಾಗಿ ಹಿಂದೆ ಸರಿದಿದೆ.
ವಿಮಾನ ನಿಲ್ದಾಣ ಒಪ್ಪಂದ ರದ್ದು
ಕಳೆದ ಆಗಸ್ಟ್ 2025ರಿಂದ ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಯುಎಇಗೆ ವಹಿಸುವ ಕುರಿತು ಮಾತುಕತೆ ನಡೆಯುತ್ತಿತ್ತು. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಅಬುಧಾಬಿ ಈ ಯೋಜನೆಯಲ್ಲಿ ತನಗೆ ಆಸಕ್ತಿಯಿಲ್ಲ ಎಂದು ತಿಳಿಸಿದೆ. ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಈ ಯೋಜನೆಯನ್ನು ಹೊರಗುತ್ತಿಗೆ ಕೊಡಲು ಸ್ಥಳೀಯ ಪಾಲುದಾರರನ್ನು ಹೆಸರಿಸುವಲ್ಲಿ ಯುಎಇ ವಿಫಲವಾಗಿರುವ ಕಾರಣ, ಹೂಡಿಕೆಯಿಂದ ಹಿಂದೆ ಸರಿದಿದೆ. ಆರ್ಥಿಕ ಮುಗ್ಗಟ್ಟಿನಲ್ಲಿರುವ ಪಾಕಿಸ್ತಾನಕ್ಕೆ ಈ ಬೆಳವಣಿಗೆಯು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಭಾರತಕ್ಕೆ ಸ್ನೇಹದ ಉಡುಗೊರೆ: 900 ಕೈದಿಗಳ ಬಿಡುಗಡೆ
ಅತ್ತ ಪಾಕಿಸ್ತಾನದ ಜೊತೆಗಿನ ಒಪ್ಪಂದ ಮುರಿದ ಬೆನ್ನಲ್ಲೇ, ಇತ್ತ ಯುಎಇ ಅಧ್ಯಕ್ಷರು ಭಾರತದ ಮೇಲೆ ತಮಗಿರುವ ವಿಶೇಷ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಕಳೆದ ವಾರ ದೆಹಲಿಗೆ ಭೇಟಿ ನೀಡಿದ್ದ ಶೇಖ್ ನಹ್ಯಾನ್ ಅವರು, ಯುಎಇ ಜೈಲುಗಳಲ್ಲಿರುವ ಸುಮಾರು 900 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಕೈಗೊಂಡಿರುವ ಈ ನಿರ್ಧಾರವು ಉಭಯ ದೇಶಗಳ ನಡುವಿನ ಗಟ್ಟಿಯಾದ ಸಂಬಂಧಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೆ, ಬಿಡುಗಡೆಯಾಗುತ್ತಿರುವ ಕೈದಿಗಳ ಮೇಲಿರುವ ಆರ್ಥಿಕ ದಂಡವನ್ನೂ ಯುಎಇ ಸರ್ಕಾರವೇ ಪಾವತಿಸಲು ನಿರ್ಧರಿಸಿರುವುದು ವಿಶೇಷ.
ಭಾರತ-ಯುಎಇ ರಕ್ಷಣಾ ಮತ್ತು ಆರ್ಥಿಕ ಪಾಲುದಾರಿಕೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷರ ಭೇಟಿಯು ಕೇವಲ ಔಪಚಾರಿಕವಾಗಿರದೆ, ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ್ದಾಗಿತ್ತು. ಉಭಯ ನಾಯಕರು ‘ರಕ್ಷಣಾ ಕಾರ್ಯತಂತ್ರದ ಪಾಲುದಾರಿಕೆ’ಯ ಕುರಿತು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರ ಅಡಿಯಲ್ಲಿ ರಕ್ಷಣಾ ಉತ್ಪಾದನೆ, ತಂತ್ರಜ್ಞಾನ ವಿನಿಮಯ ಮತ್ತು ಜಂಟಿ ತರಬೇತಿಯಲ್ಲಿ ಎರಡೂ ದೇಶಗಳು ಕೈಜೋಡಿಸಲಿವೆ. ಅಲ್ಲದೆ, 2032ರ ವೇಳೆಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು 200 ಬಿಲಿಯನ್ ಡಾಲರ್‌ಗೆ ಹೆಚ್ಚಿಸಲು ಗುರಿ ಹೊಂದಲಾಗಿದೆ.
ಬದಲಾಗುತ್ತಿರುವ ಜಾಗತಿಕ ಸಮೀಕರಣಗಳು
ಒಂದೆಡೆ ಪಾಕಿಸ್ತಾನವು ಸೌದಿ ಅರೇಬಿಯಾ ಮತ್ತು ಟರ್ಕಿಯೊಂದಿಗೆ ಸೇರಿ ರಕ್ಷಣಾ ಮೈತ್ರಿ ಮಾಡಿಕೊಳ್ಳಲು ಮುಂದಾಗುತ್ತಿದ್ದರೆ, ಯುಎಇ ಮಾತ್ರ ಭಾರತದತ್ತ ಹೆಚ್ಚು ಒಲವು ತೋರುತ್ತಿದೆ. ಯೆಮೆನ್ ವಿಚಾರದಲ್ಲಿ ಸೌದಿ ಮತ್ತು ಯುಎಇ ನಡುವೆ ಭಿನ್ನಾಭಿಪ್ರಾಯಗಳು ಮೂಡಿರುವ ಈ ಸಮಯದಲ್ಲಿ, ಅಬುಧಾಬಿ ಭಾರತವನ್ನು ತನ್ನ ಪ್ರಮುಖ ಕಾರ್ಯತಂತ್ರದ ಪಾಲುದಾರನಾಗಿ ಆರಿಸಿಕೊಂಡಿದೆ. ಪಾಕಿಸ್ತಾನದ ಹಳೆಯ ಮೂಲಸೌಕರ್ಯ ಮತ್ತು ಆಡಳಿತಾತ್ಮಕ ವೈಫಲ್ಯಗಳು ಯುಎಇ ಹೂಡಿಕೆಯಿಂದ ಹಿಂದೆ ಸರಿಯಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : ಪಿಸ್ತೂಲ್ನಲ್ಲಿ ಅನಗತ್ಯ ಗುಂಡು ಹಾರಿಸಿದ ನಟ ಕೆಆರ್‌ಕೆ ಬಂಧನ



















