ಸಿಯಾಲ್ಕೋಟ್: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಸಿಯಾಲ್ಕೋಟ್‌ನಲ್ಲಿ ಅದ್ಧೂರಿಯಾಗಿ ಉದ್ಘಾಟಿಸಿದ ‘ಪಿಜ್ಜಾ ಹಟ್‘ ಮಳಿಗೆಯೊಂದು ಈಗ ದೊಡ್ಡ ಮಟ್ಟದ ವಿವಾದ ಮತ್ತು ಹಾಸ್ಯಕ್ಕೆ ಕಾರಣವಾಗಿದೆ. ಸಚಿವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದ ಈ ಮಳಿಗೆಯು ತನ್ನ ಅಧಿಕೃತ ಶಾಖೆಯಲ್ಲ ಎಂದು ಸ್ವತಃ ಅಂತಾರಾಷ್ಟ್ರೀಯ ಪಿಜ್ಜಾ ಹಟ್ ಸಂಸ್ಥೆಯು ಘೋಷಿಸಿದ್ದು, ಸಚಿವರಿಗೆ ಭಾರೀ ಮುಜುಗರ ತಂದಿದೆ.
ಸಿಯಾಲ್ಕೋಟ್ ಕಂಟೋನ್ಮೆಂಟ್‌ನಲ್ಲಿ ಈ ನೂತನ ಮಳಿಗೆ ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ‘ಪಿಜ್ಜಾ ಹಟ್ ಪಾಕಿಸ್ತಾನ’ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. “ಸಿಯಾಲ್ಕೋಟ್‌ನಲ್ಲಿ ಪಿಜ್ಜಾ ಹಟ್ ಹೆಸರು ಮತ್ತು ಬ್ರ್ಯಾಂಡಿಂಗ್ ಬಳಸಿ ತೆರೆಯಲಾದ ಮಳಿಗೆಯು ಅನಧಿಕೃತವಾಗಿದ್ದು, ಇದಕ್ಕೂ ನಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಈ ಮಳಿಗೆಯು ಪಿಜ್ಜಾ ಹಟ್ ಅಂತಾರಾಷ್ಟ್ರೀಯ ಗುಣಮಟ್ಟ, ಪಾಕವಿಧಾನ ಅಥವಾ ಆಹಾರ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿಲ್ಲ” ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಕಾನೂನು ಕ್ರಮಕ್ಕೆ ಮುಂದಾದ ಕಂಪನಿ
ತನ್ನ ಬ್ರ್ಯಾಂಡ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಮಳಿಗೆಯ ವಿರುದ್ಧ ಪಿಜ್ಜಾ ಹಟ್ ಪಾಕಿಸ್ತಾನ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದೆ. ಈ ನಕಲಿ ಮಳಿಗೆಯ ವಿರುದ್ಧ ತಕ್ಷಣದ ಕ್ರಮಕ್ಕೆ ಆಗ್ರಹಿಸಿರುವ ಕಂಪನಿ, ತನ್ನ ಟ್ರೇಡ್‌ಮಾರ್ಕ್ ರಕ್ಷಣೆಗಾಗಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದೆ. ಸದ್ಯ ಪಾಕಿಸ್ತಾನದಲ್ಲಿ ಕೇವಲ 16 ಅಧಿಕೃತ ಪಿಜ್ಜಾ ಹಟ್ ಶಾಖೆಗಳಿದ್ದು, ಅವುಗಳಲ್ಲಿ 14 ಲಾಹೋರ್‌ನಲ್ಲಿ ಮತ್ತು 2 ಇಸ್ಲಾಮಾಬಾದ್‌ನಲ್ಲಿವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯದ ಸುರಿಮಳೆ
ಒಬ್ಬ ಜವಾಬ್ದಾರಿಯುತ ಕೇಂದ್ರ ಸಚಿವರು ಒಂದು ವಾಣಿಜ್ಯ ಮಳಿಗೆಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಉದ್ಘಾಟನೆಗೆ ತೆರಳಿದ್ದು ಹೇಗೆ ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಪಕ್ಷದ ಹಿರಿಯ ನಾಯಕರಾಗಿರುವ ಖವಾಜಾ ಆಸಿಫ್ ಅವರು ರಿಬ್ಬನ್ ಕತ್ತರಿಸುತ್ತಿರುವ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ಇದನ್ನು “ಪಾಕಿಸ್ತಾನದ ಆರ್ಥಿಕ ಸ್ಥಿತಿಯ ಪ್ರತಿಬಿಂಬ” ಎಂದು ಲೇವಡಿ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಬ್ರ್ಯಾಂಡ್‌ನ ಲೋಗೋ ಮತ್ತು ಕೆಂಪು ಬಣ್ಣದ ವಿನ್ಯಾಸವನ್ನು ನಕಲು ಮಾಡಿದ್ದರಿಂದ ಸಚಿವರು ದಾರಿ ತಪ್ಪಿದ್ದಾರೆ ಎನ್ನಲಾಗಿದ್ದರೂ, ಸಚಿವರ ಕಚೇರಿಯ ಈ ಬೇಜವಾಬ್ದಾರಿತನಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ : ಎನ್‌ಡಿಎ ಕೂಟಕ್ಕೆ ಟಿಟಿವಿ ದಿನಕರನ್ ವಾಪಸ್ : ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ



















