ಬೆಂಗಳೂರು : ನಗರದ ವಿವಿಧೆಡೆ ನಡೆಯುವ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು, ಬಂದೋಬಸ್ತ್ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಗೃಹ ಸಚಿವ ಡಾ. ಜಿ.ಪರಮೇಶ್ವರ್, ನಗರದಲ್ಲಿ ಹೊಸ ವರ್ಷಾಚರಣೆಯ ಕರ್ತವ್ಯಕ್ಕೆ ಒಟ್ಟು 20 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ ವಿಭಾಗದ 14 ಸಾವಿರ ಪೊಲೀಸರು, 2,500 ಸಂಚಾರ ಪೊಲೀಸರು, 88 ಕೆಎಸ್ಆರ್‌ಪಿ ತುಕಡಿಗಳು, 21 ಸಿಎಆರ್, 266 ಹೊಯ್ಸಳ ವಾಹನ, 250 ಕೋಬ್ರಾ ವಾಹನಗಳನ್ನ ನಿಯೋಜನೆ ಮಾಡಲಾಗುತ್ತಿದೆ. 400 ಟ್ರಾಫಿಕ್ ವಾರ್ಡನ್‌ಗಳನ್ನು ನಿಯೋಜಿಸಲಾಗಿದೆ. ಜನ ದಟ್ಟಣೆ ನಿಯಂತ್ರಿಸಲು ವಾಟರ್ ಜೆಟ್ಸ್ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಿವಿಲ್ ಡಿಫೆನ್ಸ್, ಗೃಹರಕ್ಷಕ ದಳ ಸೇರಿದಂತೆ ಒಟ್ಟು 20 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಜಿ.ಪರಮೇಶ್ವರ್ ವಿವರಿಸಿದ್ದಾರೆ.
ಹೊಸ ವರ್ಷದ ಆಚರಣೆಯಲ್ಲಿ ಹೆಚ್ಚಿನ ಜನ ಭಾಗವಹಿಸುತ್ತಿದ್ದಾರೆ. ಕಳೆದ ವರ್ಷ 8 ಲಕ್ಷಕ್ಕೂ ಹೆಚ್ಚು ಜನರು ಸಂಭ್ರಮಾಚರಣೆಗಳಲ್ಲಿ ಭಾಗವಹಿಸಿದ್ದರು. ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯನ್ನು ಹೆಚ್ಚು ಜನ ಸೇರುವ ಸ್ಥಳಗಳೆಂದು ಗುರುತಿಸಲಾಗಿದೆ. ಹಿಂದಿನ ವರ್ಷದ ಅನುಭವದ ಆಧಾರದಲ್ಲಿ ಈ ಸ್ಥಳಗಳನ್ನು ಗುರುತಿಸಲಾಗಿದೆ. ಹಿಂದಿನ ವರ್ಷಕ್ಕಿಂತ ಹೆಚ್ಚು ಜನ ಸೇರಬಹುದು ಎಂದು ಅಂದಾಜಿಸಲಾಗಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಜನ ಸೇರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
8 ಕಡೆ ಸಾರಿಗೆ ವ್ಯವಸ್ಥೆ:
ಜನರು ಸುರಕ್ಷಿತವಾಗಿ ಮನೆಗಳಿಗೆ ಹೋಗಲು ಅನುವು ಮಾಡಿಕೊಡಲಾಗುವುದು. ಬಾರ್ ಆ್ಯಂಡ್ ರೆಸ್ಟೋರೆಂಟ್, ಮೆಟ್ರೋ ಕಾರಿಡಾರ್, ಮನರಂಜನಾ ಸ್ಥಳಗಳಲ್ಲಿ ಹೆಚ್ಚಿನ ರೀತಿಯಲ್ಲಿ ಯುವಕ-ಯುವತಿಯರು ಸೇರುತ್ತಾರೆ. ಇದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅವಶ್ಯಕತೆ ಇರುವ ಸ್ಥಳಗಳಲ್ಲಿ ವಾಚ್ ಟವರ್, 180 ಕಡೆ ಫೋಕಸ್ ಲೈಟ್‌ಗಳನ್ನು ಅಳವಡಿಸಲಾಗುವುದು. ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲು ಪೊಲೀಸ್ ಆ್ಯಕ್ಸಿಸ್ ಕಂಟ್ರೋಲ್, ವಾಹನ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಕೆಲವೊಮ್ಮೆ ಟ್ಯಾಕ್ಸಿಗಳು ಸಿಗುವುದಿಲ್ಲ, ಅಂತವರು ಸುರಕ್ಷಿತವಾಗಿ ಮನೆಗಳಿಗೆ ಹೋಗಲು 8 ಕಡೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಂಭ್ರಮಾಚರಣೆ ನಡೆಯುವ ಸ್ಥಳಗಳಲ್ಲಿ 250 ಕಡೆ ತಾತ್ಕಾಲಿಕವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸೇಫ್ಟಿ ಶೆಲ್ಟರ್‌ಗಳು, ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗುತ್ತಿದೆ. ಜನದಟ್ಟಣೆಯ ಮೇಲೆ ಡ್ರೋನ್ ಕ್ಯಾಮರಾಗಳಿಂದ ಪೊಲೀಸರು ನಿಗಾವಹಿಸಲಿದ್ದಾರೆ. ಮಹಿಳಾ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಲಾಗುವುದು. ಈಗಾಗಲೇ ಬಾರ್, ರೆಸ್ಟೋರೆಂಟ್, ಮಾಲ್‌ಗಳ ಮಾಲೀಕರುಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಡಿಜಿಪಿ ಅವರು 15 ಅಂಶಗಳ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ ಎಂದರು.
ಫೇಸ್ ರೆಕಾಗ್ನೈಸೇಷನ್ ಎಐ ಕ್ಯಾಮರಾ :
ಉಗ್ರ ಕೃತ್ಯಗಳ ದೃಷ್ಟಿಯಿಂದಲೂ ಹೆಚ್ಚಿನ ಭದ್ರೆತೆಗೆ ಒತ್ತು ನೀಡಲಾಗಿದೆ. ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸಿ, ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಗಮನ ಹರಿಸಲಾಗಿದೆ. ಮುಖಚಹರೆ ಗುರುತಿಸುವ ಎಐ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಅಪರಾಧ ಚಟುವಟಿಕೆ ಹಿನ್ನೆಲೆಯುಳ್ಳವರ ಮಾಹಿತಿ ಫೇಸ್ ರೆಕಾಗ್ನೈಸೇಷನ್ ಎಐ ಕ್ಯಾಮರಾದಿಂದ ಗೊತ್ತಾಗಲಿದೆ. ಅಂತವರು ಕಂಡುಬಂದರೆ ಕೂಡಲೇ ಎಚ್ಚರಿಕೆ ನೀಡಲು, ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಕಳೆದ ಐದು ದಿನಗಳಿಂದ ನಗರದಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದವರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. 2,854 ಸವಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಹೀಟ್ ಮ್ಯಾಪ್ :
ಆಂಬ್ಯುಲೆನ್ಸ್, ವಾಹನಗಳು, ಟ್ರಾಫಿಕ್ ಸಮಸ್ಯೆ ಸೇರಿದಂತೆ ಜನರಿಗೆ ಮಾಹಿತಿ ಸಿಗಲು ಕ್ಯೂಆರ್ ಕೋಡ್ ಪರಿಚಯಿಸಲಾಗಿದೆ. ಕ್ಯೂಆರ್ ಕೋಡ್ ಮೂಲಕ ಮಾಹಿತಿ ಪಡೆಯಬಹುದು. ಇದೇ ಮೊದಲ ಬಾರಿಗೆ ‘ಹೀಟ್ ಮ್ಯಾಪ್’ ಮಾಡಲಾಗಿದೆ. ಅತೀ ಹೆಚ್ಚು ಜನ ಸೇರಿರುವ ಸ್ಥಳಗಳನ್ನು ಕೆಂಪು ಬಣ್ಣದಿಂದ ಗುರುತಿಸಲಾಗುತ್ತದೆ. ಹಳದಿ ಬಣ್ಣದಿಂದ ಗುರುತಿಸುವ ಸ್ಥಳಗಳನ್ನು ಹೆಚ್ಚಿನ ಜನ ಸೇರುತ್ತಿರುವುದನ್ನು ಸೂಚಿಸುತ್ತದೆ. ಹಸಿರು ಬಣ್ಣ ಇರುವುದು ಕಡಿಮೆ ಜನ ಇರುವುದನ್ನು ಗುರುತಿಸಬಹುದು. ಇದನ್ನು ಕಮಾಂಡ್ ಸೆಂಟರ್‌ನಿಂದ ನಿಗಾ ವಹಿಸಲಾಗುತ್ತದೆ. ಇದನ್ನು ಆಧರಿಸಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಜನರ ದಟ್ಟಣೆ ನಿಯಂತ್ರಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರಿಗೆ ಮನವಿ :
ಹೊಸ ವರ್ಷವನ್ನು ಜವಾಬ್ದಾರಿಯಿಂದ ಸಂಭ್ರಮಾಚರಣೆ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗುವುದು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ನಿಮ್ಮ ಮನೆಯ ಯುವಕರು, ಮನೆಯಿಂದ ಹೊರ ಹೋದ ಬಳಿಕ ವಾಪಸ್ ಮನೆಗೆ ಬರುವವರೆಗೂ ಅವರ ಬಗ್ಗೆ ನಿಗಾವಹಿಸಬೇಕು ಎಂದು ಸಾರ್ವಜನಿಕರಿಗೆ ಪರಮೇಶ್ವರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಚಲಿಸುತ್ತಿದ್ದಾಗಲೇ BMTC ಬಸ್ ಟೈರ್ ಬ್ಲಾಸ್ಟ್ | ಓರ್ವನಿಗೆ ಗಾಯ.. ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ!


















