ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಖಾಲಿ ನಿವೇಶನಗಳಲ್ಲಿ ನೈರ್ಮಲ್ಯ ಕಾಪಾಡದಿದ್ದರೆ, ಪಾಲಿಕೆಯೇ ಸ್ವಚ್ಛತೆ ಮಾಡಿಸಿ ಅದರ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡುವ ಜೊತೆಗೆ ದಂಡ ವಿಧಿಸುವ ನಿರ್ಧಾರವನ್ನು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷ ತೀವ್ರವಾಗಿ ಖಂಡಿಸಿದೆ. ಖಾಲಿ ನಿವೇಶನಗಳ ಮಾಲೀಕರ ಮೇಲೆ ದಂಡದ ಹೊರೆ ಹಾಕುವ ಬದಲು ನಗರದ ಸ್ವಚ್ಛತೆ ಕಾಪಾಡುವಲ್ಲಿ ಆಡಳಿತ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಪಕ್ಷ ಆಗ್ರಹಿಸಿದೆ.
ನಗರದ ಸ್ವಚ್ಛತೆ ಕಾಪಾಡುವಲ್ಲಿ GBA ಹಾಗೂ BSWML ಸಂಪೂರ್ಣವಾಗಿ ವಿಫಲವಾಗಿವೆ ಎಂದು KRS ಪಕ್ಷದ ಬೆಂಗಳೂರು ಪಶ್ಚಿಮ ಜಿಲ್ಲಾಧ್ಯಕ್ಷ ಆರ್. ದೇವರಾಜ್ ಆರೋಪಿಸಿದ್ದಾರೆ. ತಮ್ಮ ದುರಾಡಳಿತ ಹಾಗೂ ಕರ್ತವ್ಯ ಲೋಪವನ್ನು ಮುಚ್ಚಿಕೊಳ್ಳಲು ಸಾಮಾನ್ಯ ಜನರು ಮತ್ತು ಆಸ್ತಿ ಮಾಲೀಕರ ಮೇಲೆ ದಂಡ ವಿಧಿಸುವುದು ನ್ಯಾಯಯುತವಲ್ಲ ಎಂದು ಅವರು ಹೇಳಿದ್ದಾರೆ. ಈ ಕುರಿತು GBA ಮುಖ್ಯ ಆಯುಕ್ತರಿಗೆ ಪಕ್ಷದ ವತಿಯಿಂದ ಮನವಿ ಪತ್ರ ಸಲ್ಲಿಸಲಾಗಿದೆ.
ಮನೆಗಳಿಂದ ಸಮಯಕ್ಕೆ ಸರಿಯಾಗಿ ಕಸ ಸಂಗ್ರಹಿಸದಿರುವುದು, ವಾಣಿಜ್ಯ ತ್ಯಾಜ್ಯ ವಿಲೇವಾರಿಯಲ್ಲಿನ ಲೋಪ ಹಾಗೂ ಕಸ ಸಂಗ್ರಹಣಾ ನಿಯಮಗಳ ಅಸಮರ್ಪಕ ಜಾರಿಯಿಂದ ಜನರು ಅನಿವಾರ್ಯವಾಗಿ ಖಾಲಿ ನಿವೇಶನಗಳು ಮತ್ತು ರಸ್ತೆ ಬದಿಗಳಲ್ಲಿ ಕಸ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು KRS ಹೇಳಿದೆ. ಸಾರ್ವಜನಿಕರ ಖಾಲಿ ನಿವೇಶನಗಳಿಗೆ ದಂಡ ವಿಧಿಸುವ ಮೊದಲು ಸರ್ಕಾರಿ ಆಸ್ತಿಗಳು, ಕಚೇರಿ ಆವರಣಗಳು, ಉದ್ಯಾನವನಗಳು, ಮೈದಾನಗಳು ಹಾಗೂ ರಸ್ತೆ ಬದಿಗಳಲ್ಲಿರುವ ಕಸದ ರಾಶಿಯನ್ನು ಸ್ವಚ್ಛಗೊಳಿಸಿ, ಸಂಬಂಧಪಟ್ಟ ಇಲಾಖೆಯಿಂದಲೇ ದಂಡ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದೆ.
ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುತ್ತಿದ್ದರೂ, ಸುಮಾರು 2,000 ಕೋಟಿ ರೂಪಾಯಿಗಳನ್ನು ಕಸ ನಿರ್ವಹಣೆಗೆ ವೆಚ್ಚ ಮಾಡಲಾಗುತ್ತಿದೆ ಎಂದು KRS ಪ್ರಶ್ನಿಸಿದೆ. GPS, ಆ್ಯಪ್‌ಗಳು ಹಾಗೂ ಕಸ ಗುಡಿಸುವ ಯಂತ್ರಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದರೂ ನಗರದ ನೈರ್ಮಲ್ಯ ಪರಿಸ್ಥಿತಿ ಸುಧಾರಿಸಿಲ್ಲ. ಅಸಮರ್ಪಕ ಕಸ ನಿರ್ವಹಣೆ, ಕಸ ಸುಡುವುದರಿಂದ ಉಂಟಾಗುವ ವಿಷಕಾರಿ ಹೊಗೆ ಹಾಗೂ ಲ್ಯಾಂಡ್‌ಫಿಲ್‌ಗಳಿಂದಾಗುವ ಜಲಮಾಲಿನ್ಯ ಮತ್ತು ರೋಗರುಜಿನಗಳಿಗೆ ಆಡಳಿತವೇ ಹೊಣೆಗಾರಿಕೆ ವಹಿಸಬೇಕು ಎಂದು ಪಕ್ಷ ಆಗ್ರಹಿಸಿದೆ.
ಖಾಲಿ ನಿವೇಶನಗಳ ಮಾಲೀಕರಿಗೆ ದಂಡ ವಿಧಿಸುವ ಅವಿವೇಕದ ಮತ್ತು ವಿವೇಚನಾರಹಿತ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು KRS ಪಕ್ಷ ಸರ್ಕಾರ ಹಾಗೂ GBA ಆಡಳಿತವನ್ನು ಒತ್ತಾಯಿಸಿದೆ. ಜೊತೆಗೆ ಕಸ ನಿರ್ವಹಣೆಯಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ತಡೆಯಬೇಕು ಹಾಗೂ ಸಾರ್ವಜನಿಕರಿಗೆ ಕಿರುಕುಳ ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಪಕ್ಷ ಆಗ್ರಹಿಸಿದೆ.
ಇದನ್ನೂ ಓದಿ : ಮಹಿಳಾ PSIಗೆ ಕಪಾಳಮೋಕ್ಷ ಕೇಸ್ ; 3 ದಿನದಲ್ಲಿ ಸಂಪೂರ್ಣ ತನಿಖಾ ವರದಿ ನೀಡಲು ಮಹಿಳಾ ಆಯೋಗ ಸೂಚನೆ!


















