ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಅವಧಿ ವಿಸ್ತರಣೆ ಸಂಬಂಧ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು(ಮಂಗಳವಾರ) ಶಾಸಕರ ಭವನದ ಮುಂಭಾಗ ಇರುವ ಮಹರ್ಷಿ ವಾಲ್ಮೀಕಿ ತಪೋವನದಲ್ಲಿರುವ ಶ್ರೀ ವಾಲ್ಮೀಕಿ ಜಯಂತಿಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಿಎಂ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅವಧಿ ವಿಸ್ತರಣೆ ಸಂಬಂಧ ಸಭೆ ಕರೆದಿದ್ದೇನೆ. ಇವತ್ತು ಸಮೀಕ್ಷೆಗೆ ಡೆಡ್ಲೈನ್ ಇರುವುದರಿಂದ ಸಭೆ ಕರೆದಿದ್ದೇನೆ. ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಶಿಕ್ಷಣ ಇಲಾಖೆ ಆದೇಶದ ಬಗ್ಗೆ ಗೊತ್ತಿಲ್ಲ. ಸಭೆಯಲ್ಲಿ ಅವಧಿ ವಿಸ್ತರಣೆ ಬಗ್ಗೆ ತೀರ್ಮಾನ ಮಾಡ್ತೇವೆ ಎಂದರು.
ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ದಿನಾಚರಣೆಯ ಶುಭಾಶಯಗಳು. ವಾಲ್ಮೀಕಿ ಪ್ರತಿಮೆಗೆ ಸರ್ಕಾರದ ಪರವಾಗಿ ಮಾಲಾರ್ಪಣೆ ಮಾಡಿದ್ದೇವೆ. ದೇಶಕಂಡತಂಹ ಅಪರೂಪದ ಸಾಹಿತಿ. ರಾಮಾಯಣವನ್ನು ಬರೆದು ಇಡೀ ಜಗತ್ತಿಗೆ ಪರಿಚಯಿಸಿದವರು. ವಾಲ್ಮೀಕಿಯವರು ಶೂದ್ರ ಜನಾಂಗದಲ್ಲಿ ಜನಿಸಿದ್ದರೂ ಮಹಾನ್ ಕಾರ್ಯ ಮಾಡಿದ್ದಾರೆ.
ಇಲ್ಲಿ ಮೊದಲು ವಾಲ್ಮೀಕಿ ಪ್ರತಿಮೆ ಇರಲಿಲ್ಲ. 2017 ರಲ್ಲಿ ನಿರ್ಮಾಣ ಮಾಡಿದ್ದೇವೆ. ಆನಂತರ ಕನಕದಾಸರ ಪ್ರತಿಮೆಯನ್ನು ಮಾಡಲಾಯಿತು. ಇವರೆಲ್ಲರೂ ಸಮಾಜಮುಖಿಯಾಗಿ ಕೆಲಸ ಮಾಡಿದ್ದರು. ಅವರು ಯಾವ ಮೌಲ್ಯಗಳಿಗೋಸ್ಕರ ಬದುಕಿದ್ದರೋ ಆ ಮೌಲ್ಯಗಳನ್ನು ಆಚರಣೆ ಮಾಡುವ ಪ್ರಯತ್ನವನ್ನು ನಾವೆಲ್ಲ ಮಾಡುತ್ತೇವೆ. ದಿನನಿತ್ಯ ಇವರನ್ನು ಶಾಸಕರು, ಸಚಿವರು ನೋಡಬೇಕು ಎಂದು ತಿಳಿಸಿದ್ದಾರೆ.
ಇನ್ನೂ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಮೇಲೆ ಶೂ ಎಸೆಯಲು ಯತ್ನಿಸಿದ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿ, ಸಿಜೆಐ ಗವಾಯಿ ಅವರು ಕ್ಷಮಿಸಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮನುವಾದಿಗಳ ಪ್ರಯತ್ನ ಇದು. ಇದರಿಂದ ಸಿಜೆ ಅವರು ವಿಚಲಿತರಾಗಿಲ್ಲ. ಕ್ಷಮೆ ಕೊಟ್ಟಿದ್ದಾರೆ, ಅದು ಅವರ ದೊಡ್ಡತನ. ಸನಾತನವಾದಿಗಳ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ನಾಯಕ ಸಮುದಾಯಕ್ಕೆ 2 ಸಚಿವ ಸ್ಥಾನ ನೀಡಬೇಕೆಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮುಂದಿನ ದಿನಗಳಲ್ಲಿ ಸಂಪುಟ ಪುನಾರಚನೆ ಮಾಡಿದಾಗ ನೋಡೊಣ ಎಂದು ಉತ್ತರಿಸಿದ್ದಾರೆ.
ಇದೇ ವೇಳೆ ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಹೆಚ್.ಮುನಿಯಪ್ಪ, ಕಾಂಗ್ರೆಸ್ ನಾಯಕರಾದ ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವರು ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಗೌರವ ನಮನ ಸಲ್ಲಿಸಿದ್ದಾರೆ.


















