ಚಿಕ್ಕಮಗಳೂರು: ಸೊಸೆಯೊಬ್ಬಳು ನಿದ್ದೆ ಮಾತ್ರೆ ಹಾಕಿ ಅತ್ತೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಈ ಘಟನೆ ಜಿಲ್ಲೆಯ (Chikkamagaluru) ಅಜ್ಜಂಪುರ (Ajjampur) ತಾಲೂಕಿನ ತಡಗ ಗ್ರಾಮದ ದೇವಿರಮ್ಮ (75) ಎಂಬಲ್ಲಿ ನಡೆದಿದೆ. ಆ. 11ರಂದು ಈ ಘಟನೆ ನಡೆದಿದ್ದು, ಅಂದು ಊಟ ಮಾಡುತ್ತಿದ್ದಂತೆ ಅತ್ತೆ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಸೊಸೆ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾಳೆ. ಅಲ್ಲದೇ, ಅತ್ತೆ ದೇವಿರಮ್ಮ ಅವರ ಮಗಳಿಗೂ ಕರೆ ಮಾಡಿದ್ದಾಳೆ. ಆದರೆ, ದಾವಣಗೆರೆಗೆ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆ ಅತ್ತೆ ಸಾವನ್ನಪ್ಪಿದ್ದಾರೆ.
ಆನಂತರ ಆ.12 ರಂದು ದೇವಿರಮ್ಮ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸಂಬಂಧಿಕರು ಕೂಡ ವಯಸ್ಸಾದ ಹಿನ್ನೆಲೆಯಲ್ಲಿ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಆದರೆ, ದೇವಿರಮ್ಮ ಅವರಿಗೆ ಸಂಬಂಧಿಸಿದ ಹಣ, ಚಿನ್ನಾಭರಣ ಕಾಣೆಯಾಗಿದ್ದು ಕಂಡು ಮಗಳು ವೀಣಾ, ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ದಾಖಲಿಸಿದ್ದರು. ಆನಂತರ ಪೊಲೀಸರು ಅಶ್ವಿನಿಯನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ. ಆನಂತರ ಅಶ್ವಿನಿಗೆ ಕಳ್ಳ ಸಂಬಂಧ ಇರುವುದು ಹಾಗೂ ಆ ಸಂಬಂಧದಿಂದಾಗಿ ಕಳ್ಳತನ ಕಾಯಕಕ್ಕೆ ಇಳಿದಿದ್ದಳು ಎನ್ನಲಾಗಿದೆ. ಸದ್ಯ ಆರೋಪಿ ಬಂಧಿಸಿರುವ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.



















