ನವದೆಹಲಿ: ಸುಪ್ರೀಂ ಕೋರ್ಟ್ ಆವರಣದಲ್ಲಿ ಸೋಮವಾರ ನಡೆದ ಪ್ರತಿಭಟನೆಯನ್ನು ವರದಿ ಮಾಡುವ ವೇಳೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಕೈಯನ್ನು ಜೋರಾಗಿ ಎಳೆದು ತಳ್ಳಿದ್ದಾರೆ ಎಂದು ಗರ್ಭಿಣಿ ಪತ್ರಕರ್ತೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆಯಿಂದ ಗಾಯಗೊಂಡಿರುವ ‘ಒನ್ ಇಂಡಿಯಾ’ ಸುದ್ಧಿಸಂಸ್ಥೆಯ ಮಾಧ್ಯಮ ಪ್ರತಿನಿಧಿ ರಿಚಾ ಪರಾಶರ್ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಕಾಂಗ್ರೆಸ್ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇದು ಬಿಜೆಪಿಯ ಯೋಜಿತ ಅಪಪ್ರಚಾರ ಎಂದು ಕಿಡಿಕಾರಿದೆ.
ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದಿದ್ದೇನು?
ಎಸ್ಐಆರ್ (SIR) ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ‘ಇಂಡಿಯಾ’ ಒಕ್ಕೂಟವು ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ರಾಹುಲ್ ಗಾಂಧಿ ಅವರಿಂದ ಹೇಳಿಕೆ (ಸೌಂಡ್ ಬೈಟ್) ಪಡೆಯಲು ಮೈಕ್ ಅನ್ನು ಅವರ ಮುಂದೆ ಒಡ್ಡಿದಾಗ, ಕೋಪಗೊಂಡ ರಾಹುಲ್ ಗಾಂಧಿ ತಮ್ಮ ಕೈಯನ್ನು ಬಲವಾಗಿ ಎಳೆದು ತಳ್ಳಿದರು ಎಂದು ಮೂರು ತಿಂಗಳ ಗರ್ಭಿಣಿಯಾಗಿರುವ ರಿಚಾ ಪರಾಶರ್ ಆಸ್ಪತ್ರೆಯ ಮಂಚದ ಮೇಲಿಂದ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪರಿಣಾಮವಾಗಿ ತಾವು ಮೆಟ್ಟಿಲುಗಳ ಮೇಲೆ ಬಿದ್ದಿದ್ದು, ಹೊಟ್ಟೆ ಹಾಗೂ ಮೊಣಕಾಲಿನ ಭಾಗಕ್ಕೆ ಪೆಟ್ಟಾಗಿದೆ. ಹಿಂದೆ ಇದ್ದ ಕ್ಯಾಮೆರಾಮನ್ ಕೂಡ ತಮ್ಮ ಮೇಲೆಯೇ ಬಿದ್ದರು ಎಂದು ಅವರು ಆರೋಪಿಸಿದ್ದಾರೆ.
ಆರೋಪ ನಿರಾಕರಿಸಿದ ಕಾಂಗ್ರೆಸ್
ರಾಹುಲ್ ಗಾಂಧಿ ವಿರುದ್ಧದ ಆರೋಪಗಳನ್ನು ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಹಾಗೂ ಪಕ್ಷದ ಇತರ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಘಟನೆಯ ವಿಡಿಯೋ ದೃಶ್ಯಾವಳಿಗಳನ್ನು ಹಂಚಿಕೊಂಡಿರುವ ಕಾಂಗ್ರೆಸ್, ವಿಡಿಯೋದಲ್ಲಿ ಎಲ್ಲಿಯೂ ರಾಹುಲ್ ಗಾಂಧಿ ಪತ್ರಕರ್ತೆಯನ್ನು ತಳ್ಳಿದ ದೃಶ್ಯಗಳಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಗರ್ಭಿಣಿಯೊಬ್ಬರು ಪ್ರತಿಭಟನಾ ಸ್ಥಳಕ್ಕೆ ಬರುವುದು ಅಪಾಯಕಾರಿ. ಮಧ್ಯಾಹ್ನ ನಡೆದ ಘಟನೆಗೆ ರಾತ್ರಿ ಆಸ್ಪತ್ರೆಗೆ ದಾಖಲಾಗಿರುವುದು ಹಾಗೂ ಗರ್ಭಿಣಿಯರಿಗೆ ಸಾಮಾನ್ಯವಾಗಿ ಮಾಡದ ಎಕ್ಸ್-ರೇ ಪರೀಕ್ಷೆಗೆ ಒಳಗಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ವಾದಿಸಿದೆ.
ಬಿಜೆಪಿ ಆಕ್ರೋಶ
ಈ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ರಿಚಾ ಪರಾಶರ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, “ಸ್ತ್ರೀ ಸಮಾನತೆ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ಗೂಂಡಾಗಳಂತೆ ವರ್ತಿಸಿದ್ದಾರೆ. ಸಂಕಷ್ಟದಲ್ಲಿದ್ದ ಪತ್ರಕರ್ತೆಗೆ ಸಹಾಯ ಮಾಡುವ ಸೌಜನ್ಯವೂ ಕಾಂಗ್ರೆಸ್ ಕಾರ್ಯಕರ್ತರಿಗೆ ಇರಲಿಲ್ಲ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ನೀವೀಗ ಉತ್ತರಾಖಂಡ ರಾಜ್ಯಪಾಲ: ಮೊಮ್ಮಗನೊಂದಿಗೆ ವಾಕಿಂಗ್ ಮಾಡುತ್ತಿದ್ದ ಮಾಜಿ ಸಚಿವರಿಗೆ ಅಚ್ಚರಿಯ ಕರೆ!



















