ಡೆನ್ವರ್: ಅಮೆರಿಕದ ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ ಏರ್‌ಲೈನ್ಸ್‌ನ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಟೇಕ್‌ಆಫ್ ಆಗುವ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡು ಭಾರಿ ಆತಂಕ ಸೃಷ್ಟಿಯಾದ ಘಟನೆ ಶನಿವಾರ ನಡೆದಿದೆ. ಹೊಗೆ ದಟ್ಟವಾಗಿ ಆವರಿಸುತ್ತಿದ್ದಂತೆ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತುರ್ತು ಸ್ಲೈಡ್‌ಗಳ ಮೂಲಕ ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಭಯಭೀತಿಯಲ್ಲಿದ್ದ ಪ್ರಯಾಣಿಕರು ಸ್ಲೈಡ್ ನಿಂದ ಇಳಿದು ಓಡುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ಮಿಯಾಮಿಗೆ ಹೊರಟಿದ್ದ ಫ್ಲೈಟ್ 3023 ವಿಮಾನದಲ್ಲಿ 173 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಇದ್ದರು. ವಿಮಾನವು ಟೇಕ್‌ಆಫ್ ಆಗಲು ರನ್‌ವೇ ಮೇಲೆ ಚಲಿಸುತ್ತಿದ್ದಾಗ ಅದರ ಲ್ಯಾಂಡಿಂಗ್ ಗೇರ್‌ನಲ್ಲಿ ಯಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.
ತುರ್ತು ಸ್ಥಳಾಂತರ ಮತ್ತು ರಕ್ಷಣೆ:
ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ “ನಿಮ್ಮ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ” ಎಂಬ ಎಚ್ಚರಿಕೆ ಬಂದ ತಕ್ಷಣ, ಪೈಲಟ್‌ಗಳು ಟೇಕ್‌ಆಫ್ ಅನ್ನು ರದ್ದುಗೊಳಿಸಿದರು. ವಿಮಾನದ ಎಡ ಹಿಂಭಾಗದಿಂದ ದಟ್ಟವಾದ ಹೊಗೆ ಬರುತ್ತಿದ್ದರೂ, ಸಿಬ್ಬಂದಿಯ ಸಮಯೋಚಿತ ನಿರ್ಧಾರದಿಂದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ತುರ್ತು ನಿರ್ಗಮನ ದ್ವಾರದ ಸ್ಲೈಡ್‌ಗಳನ್ನು ಬಳಸಿ ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಆತಂಕಗೊಂಡ ಪ್ರಯಾಣಿಕರು ಸ್ಲೈಡ್‌ಗಳಿಂದ ಜಾರುತ್ತಿರುವ ದೃಶ್ಯಗಳು ವೀಡಿಯೊಗಳಲ್ಲಿ ಸೆರೆಯಾಗಿವೆ.
ಡೆನ್ವರ್ ಅಗ್ನಿಶಾಮಕ ದಳವು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದೆ. ಘಟನೆಯಲ್ಲಿ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಯಾಣಿಕರನ್ನು ಬಸ್‌ಗಳ ಮೂಲಕ ಟರ್ಮಿನಲ್‌ಗೆ ಕರೆದೊಯ್ಯಲಾಯಿತು ಮತ್ತು ಅವರಿಗೆ ಮಿಯಾಮಿಗೆ ಪ್ರಯಾಣಿಸಲು ಬದಲಿ ವಿಮಾನದ ವ್ಯವಸ್ಥೆ ಮಾಡಲಾಯಿತು ಎಂದು ಅಮೆರಿಕನ್ ಏರ್‌ಲೈನ್ಸ್ ತಿಳಿಸಿದೆ.
ವಿಮಾನಯಾನ ಸಂಸ್ಥೆಯು ಈ ಘಟನೆಗಾಗಿ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ ಮತ್ತು ಘಟನೆಯ ಕುರಿತು ಎಫ್‌ಎಎ ತನಿಖೆ ನಡೆಸುತ್ತಿದೆ.


















