ಶಿವಮೊಗ್ಗ: ಬಂಟ್ವಾಳದಲ್ಲಿ ಅಬ್ದುಲ್ ರಹೀಂ ಹತ್ಯೆ ಪ್ರಕರಣ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಶಿವಮೊಗ್ಗದಲ್ಲಿ ಮಾದ್ಯಮರೊಂದಿಗೆ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿರುವುದು ಬಹಳ ನೋವಿನ ಸಂಗತಿ. ಸರಣಿ ಹತ್ಯೆ ಆಗುತ್ತಿರುವುದು ಜಿಲ್ಲೆ ಹಾಗೂ ರಾಜ್ಯಕ್ಕೂ ಕೂಡ ಕೆಟ್ಟ ಹೆಸರು. ರಹೀಂ ಈಗಾಗಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಾಯಗೊಂಡಿದ್ದಾರೆ. ಪೊಲೀಸರಿಗೆ ಪ್ರಾಥಮಿಕ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಬಂದಿಸುತ್ತಾರೆ.
ಹಳೆ ವೈಷಮ್ಯದಿಂದ ಹತ್ಯೆಯಾಗಿದೆ ಎಂದು ಹೇಳಲಾಗುತ್ತಿದೆ. ಕೋಮುವಾದದ ಕೆಟ್ಟ ವಾತಾವರಣ ಅಲ್ಲಿ ನಿರ್ಮಾಣ ಆಗಿದೆ. ಅದರ ಫಲಶೃತಿಯೇ ಈ ಘಟನೆ. ಪೊಲೀಸರ ತನಿಖೆಯ ನಂತರ ಎಲ್ಲವೂ ತಿಳಿಯಲಿದೆ. ಎಲ್ಲಾ ರೀತಿಯ ಕಟ್ಟೆಚ್ಚರವನ್ನು ಪೊಲೀಸರು ವಹಿಸಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಗುಂಡೂರಾವ್, ಅವರ ತರ ಪ್ರಚೋದನಾಕಾರಿಯಾಗಿ ಮಾತನಾಡಲ್ಲ. ಆ ತರ ಜನ ನಾವಲ್ಲ. ಅವರ ಬಾಯಿಗೆ ಲಂಗು ಲಗಾಮಿಲ್ಲ. ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಶವ ಸಿಕ್ಕರೂ ಅದರ ಮೇಲೆ ರಾಜಕೀಯ ಮಾಡ್ತಾರೆ. ಅವರ ಬಂಡವಾಳನೇ ಅದು… ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಟ್ಟ ವ್ಯವಸ್ಥೆ ನಿರ್ಮಾಣ ಆಗೋಕೆ ಅವರು ಕೂಡ ಕಾರಣ ಎಂದು ಬಿಜೆಪಿ ವಿರುದ್ಧ ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದರು.