ಇಸ್ಲಾಮಾಬಾದ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ 125 ವರ್ಷಗಳ ಇತಿಹಾಸ ಹೊಂದಿದ್ದ ಐತಿಹಾಸಿಕ ಗುರುದ್ವಾರವೊಂದನ್ನು ಸ್ಥಳೀಯ ಉದ್ಯಮಿಯೊಬ್ಬರು ಧ್ವಂಸಗೊಳಿಸಿದ್ದಾರೆ. ಇದಕ್ಕೆ ಸಿಖ್ ಸಮುದಾಯವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಲಾಹೋರ್‌ನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಫಾರೂಕಾಬಾದ್‌ನ ‘ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್’ ಮೇಲಿನ ಈ ದಾಳಿಯನ್ನು ಭಾರತ ಸರ್ಕಾರವು ಕಟುವಾಗಿ ಖಂಡಿಸಿದೆ. ಇದು “ಅತ್ಯಂತ ಖೇದಕರ ಮತ್ತು ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯ” ಎಂದು ಭಾರತ ಬಣ್ಣಿಸಿದೆ. ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ನಿರಾಕ್ಷೇಪಣಾ ಪತ್ರ (NOC) ಪಡೆಯದೆಯೇ ಜೂನ್ 24ರ ರಾತ್ರಿ ಈ ಪಾರಂಪರಿಕ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ ಎಂದು ವರದಿಯಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಮತ್ತು ಅವರ ಧಾರ್ಮಿಕ ಸ್ಥಳಗಳನ್ನು ವ್ಯವಸ್ಥಿತವಾಗಿ ಗುರಿಪಡಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಅಧಿಕಾರಿಗಳು ಅಥವಾ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ETPB) ಈ ಬಗ್ಗೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಗಂಭೀರ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಸರ್ಕಾರವು ಈ ಘಟನೆಯ ಬಗ್ಗೆ ತಕ್ಷಣವೇ ಸಮಗ್ರ ತನಿಖೆ ನಡೆಸಿ, ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಧ್ವಂಸಗೊಂಡಿರುವ ಗುರುದ್ವಾರದ ಭಾಗಗಳನ್ನು ಆದಷ್ಟು ಬೇಗ ಪುನರ್ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ, ತನ್ನ ದೇಶದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಾತ್ರಿಪಡಿಸುವುದು ಇಸ್ಲಾಮಾಬಾದ್‌ನ ಕರ್ತವ್ಯ ಎಂಬುದನ್ನೂ ಭಾರತ ನೆನಪಿಸಿದೆ.
ಪಾಕ್ ಅಲ್ಪಸಂಖ್ಯಾತರ ಪ್ರತಿಭಟನೆ
ಗುರುದ್ವಾರ ಧ್ವಂಸಗೊಂಡ ಬೆನ್ನಲ್ಲೇ ಸ್ಥಳೀಯ ಸಿಖ್ ಸಮುದಾಯದವರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದಾರೆ. ಅಲ್ಪಸಂಖ್ಯಾತರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತಕ್ಷಣದ ಕ್ರಮಕ್ಕೆ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಪಂಜಾಬ್ ಪ್ರಾಂತ್ಯದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ರಮೇಶ್ ಸಿಂಗ್ ಅರೋರಾ ಅವರು ಶೇಖುಪುರ ಜಿಲ್ಲೆಯ ಉನ್ನತ ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಮತ್ತು ಅವರ ಧಾರ್ಮಿಕ ಸ್ಥಳಗಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಮರ್ಯಮ್ ನವಾಜ್ ಸ್ಪಷ್ಟಪಡಿಸಿದ್ದಾರೆ ಎಂದೂ ಸಚಿವರು ತಿಳಿಸಿದ್ದಾರೆ.
ತಕ್ಷಣವೇ ಪುನರ್ನಿರ್ಮಾಣಕ್ಕೆ ಆದೇಶ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ರಮೇಶ್ ಸಿಂಗ್ ಅರೋರಾ, ಧ್ವಂಸಗೊಂಡಿರುವ ಗುರುದ್ವಾರದ ಪುನರ್ನಿರ್ಮಾಣ ಕಾರ್ಯವನ್ನು ತಕ್ಷಣವೇ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗೆಯೇ, ಈ ಭೂಮಿಯ ಮಾಲೀಕತ್ವ ಮತ್ತು ಕಾನೂನು ಸ್ಥಿತಿಗತಿಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಔಕಾಫ್ (Auqaf) ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಆಸ್ತಿಯು ಔಕಾಫ್ ಇಲಾಖೆಯ ಅಡಿಯಲ್ಲಿ ನೋಂದಣಿಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಐತಿಹಾಸಿಕ ಧಾರ್ಮಿಕ ಪರಂಪರೆಯನ್ನು ಉಳಿಸಲು ಸರ್ಕಾರ ಸರ್ವಪ್ರಯತ್ನ ಮಾಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಸ್ಥಳೀಯ ವ್ಯಾಪಾರಿಗಳ ಆತಂಕ
ಇನ್ನೊಂದೆಡೆ, ಸರ್ಕಾರದ ಈ ಪುನರ್ನಿರ್ಮಾಣ ಯೋಜನೆಗೆ ಸ್ಥಳೀಯ ಮುಸ್ಲಿಂ ವ್ಯಾಪಾರಿಗಳು ಮತ್ತು ನಿವಾಸಿಗಳಿಂದ ಕೆಲವು ಆಕ್ಷೇಪಗಳು ವ್ಯಕ್ತವಾಗಿವೆ. ಈ ಗುರುದ್ವಾರದ ಆವರಣವು ಕಳೆದ ಸುಮಾರು 80 ವರ್ಷಗಳಿಂದ ಬಳಕೆಯಲ್ಲಿರಲಿಲ್ಲ. ಈ ಸುದೀರ್ಘ ಅವಧಿಯಲ್ಲಿ ಹತ್ತಾರು ಕುಟುಂಬಗಳು ಇಲ್ಲಿ ನೆಲೆಸಿದ್ದು, ಹಲವು ಅಂಗಡಿ ಮುಂಗಟ್ಟುಗಳು ತಲೆಎತ್ತಿವೆ. ಈಗ ಗುರುದ್ವಾರವನ್ನು ಮರುಸ್ಥಾಪಿಸುವುದರಿಂದ ಹಲವು ಕುಟುಂಬಗಳು ಬೀದಿಪಾಲಾಗುವ ಭೀತಿ ಎದುರಾಗಿದೆ. ಒಂದು ವೇಳೆ ಅಲ್ಲಿಂದ ತೆರವುಗೊಳಿಸುವುದು ಅನಿವಾರ್ಯವಾದರೆ, ಬಾಧಿತ ಕುಟುಂಬಗಳಿಗೆ ಸರ್ಕಾರ ಪರ್ಯಾಯ ವಸತಿ ಮತ್ತು ಜೀವನೋಪಾಯದ ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಮನೆಗೆ ನುಗ್ಗಿ ಅಕ್ಕ-ತಂಗಿಗೆ ಮಾರಣಾಂತಿಕ ಹಲ್ಲೆ, ಚಾಕು ಇರಿತ ; 10ಕ್ಕೂ ಹೆಚ್ಚು ಮಂದಿ ವಿರುದ್ಧ FIR!


















