ಚಿಕ್ಕಬಳ್ಳಾಪುರ : ಜಿಲ್ಲೆಯ ಚಿಂತಾಮಣಿ ನಗರದ ಆಶ್ರಯ ಬಡಾವಣೆಯಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ಅಕ್ಕ-ತಂಗಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಮೇಘನಾ (18) ಹಾಗೂ ಆಕೆಯ ತಂಗಿ ನಿಹಾರಿಕಾ ಹಲ್ಲೆಗೆ ಒಳಗಾದವರು. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೇಘನಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮಾಹಿತಿಯ ಪ್ರಕಾರ, ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಕಾರ್ತಿಕ್ ಮತ್ತು ವಿನೋದ್ ಎಂಬ ಯುವಕರು “ಮೇಡಂ… ಮೇಡಂ…” ಎಂದು ಅನುಚಿತವಾಗಿ ವರ್ತಿಸಿ ಚುಡಾಯಿಸಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮೇಘನಾ, ಆರೋಪಿಗಳಲ್ಲಿ ಒಬ್ಬನ ಕೆನ್ನೆಗೆ ಹೊಡೆದು ಮನೆಗೆ ಬಂದು ತಾಯಿಗೆ ವಿಷಯ ತಿಳಿಸಿದ್ದರು.
ಇದಾದ ಬಳಿಕ ರಾತ್ರಿ ಸುಮಾರು 8.30ರ ವೇಳೆಗೆ 10ಕ್ಕೂ ಹೆಚ್ಚು ಮಂದಿಯ ಗುಂಪು ಮನೆಗೆ ನುಗ್ಗಿ ಮೇಘನಾ ಹಾಗೂ ಆಕೆಯ ತಂಗಿ ನಿಹಾರಿಕಾ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ದುಷ್ಕರ್ಮಿಗಳು ಮೇಘನಾ ಅವರ ಹೊಟ್ಟೆ ಹಾಗೂ ಕತ್ತಿನ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಆರೋಪಿಗಳು ಗಾಂಜಾ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಘಟನೆ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ 10ಕ್ಕೂ ಹೆಚ್ಚು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಉಡುಪಿಯಲ್ಲಿ ಬಸ್ ಏಣಿ ಏರಿ ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣ – ವಿಡಿಯೋ ವೈರಲ್!


















