ಬೆಂಗಳೂರು : ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು 22 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಎಚ್‌ಎಸ್‌ಆರ್ ಲೇಔಟ್‌ನ ಅಗರ ಕೆರೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ವಾಣಿ ಎಂದು ಗುರುತಿಸಲಾಗಿದ್ದು, ನಿನ್ನೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬೆಳಮಕ್ಕಿ ಮೂಲದ ವಾಣಿ, ಸುಮಾರು ಒಂದು ವರ್ಷದ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ವಾಣಿ ಹಾಗೂ ಅಭಿಷೇಕ್ ಕಾಲೇಜು ದಿನಗಳಲ್ಲಿ ಸಹಪಾಠಿಗಳಾಗಿದ್ದರು. ಇದೇ ಪರಿಚಯದ ಹಿನ್ನೆಲೆ ಅಭಿಷೇಕ್ ವಾಣಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ವಾಟ್ಸ್‌ಆ್ಯಪ್ ಮೂಲಕ ವಿಡಿಯೋ ಹಾಗೂ ಫೋಟೋಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಅಭಿಷೇಕ್, ತಾನು ಕರೆದಾಗಲೆಲ್ಲ ರೂಮಿಗೆ ಬರಬೇಕು ಎಂದು ಮೆಸೇಜ್ ಮಾಡುತ್ತಿದ್ದ ಎಂದು ವಾಣಿ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. “ಅಭಿಷೇಕ್‌ನ ಕಿರುಕುಳದಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇನೆ. ಆತನಿಗೆ ಶಿಕ್ಷೆಯಾಗಬೇಕು. ನಮ್ಮ ಕುಟುಂಬ ಮರ್ಯಾದೆ ಹೋಗುತ್ತದೆ” ಎಂದು ಡೆತ್‌ನೋಟ್‌ನಲ್ಲಿ ವಾಣಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ವಾಣಿ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್‌ನೋಟ್ ಪೊಲೀಸರ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯವಾಗಿದ್ದು, ಅದರ ಆಧಾರದ ಮೇಲೆ ಅಭಿಷೇಕ್ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ವಾಣಿ ಹಾಗೂ ಅಭಿಷೇಕ್ ನಡುವಿನ ಮೊಬೈಲ್ ಸಂಭಾಷಣೆ, ವಾಟ್ಸ್‌ಆ್ಯಪ್ ಸಂದೇಶಗಳು, ವಿಡಿಯೋ ಮತ್ತು ಫೋಟೋಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಚ್‌ಎಸ್‌ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಭಿಷೇಕ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಒಡಿಶಾ ಕರಾವಳಿಯಲ್ಲಿ ಪನಾಮಾ ಸರಕು ಹಡಗು ಮುಳುಗಡೆ : 22 ವಿದೇಶಿ ಸಿಬ್ಬಂದಿ ನಾಪತ್ತೆ, ಇಬ್ಬರ ರಕ್ಷಣೆ!



















