ಬೆಂಗಳೂರು : ನಗರದ ಬ್ಯಾಡರಹಳ್ಳಿ ವ್ಯಾಪ್ತಿಯ ಖಾಸಗಿ ಡಯಾಗ್ನೋಸ್ಟಿಕ್ ಲ್ಯಾಬ್‌ವೊಂದರಲ್ಲಿ ತಪಾಸಣೆಗೆ ಬಂದಿದ್ದ ಮಹಿಳಾ ಲಾಯರ್‌ಗೆ ಕಿರುಕುಳ ನೀಡಿ ಬಳಿಕ ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಪ್ರಕಾಶ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ ಮ್ಯಾನೇಜರ್ ಪ್ರಭಾಕರ್ ಹಾಗೂ ಸಿಬ್ಬಂದಿ ಪ್ರದೀಪ್ ಎಂಬುವವರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ವಕೀಲೆಯೊಬ್ಬರು ಥೈರಾಯ್ಡ್ ತಪಾಸಣೆಗಾಗಿ ಬ್ಯಾಡರಹಳ್ಳಿಯ ಪ್ರಕಾಶ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗೆ ತೆರಳಿದ್ದರು. ಈ ವೇಳೆ ರಕ್ತದ ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿ ಲ್ಯಾಬ್ ತಂತ್ರಜ್ಞ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ.
ರಕ್ತ ತೆಗೆಯುವಾಗ ನೋವಾಗುತ್ತಿದೆ ಎಂದು ಮಹಿಳೆ ಕಿರುಚಿಕೊಂಡರೂ ನಿರ್ಲಕ್ಷ್ಯ ವಹಿಸಿ ಬಲವಂತವಾಗಿ ರಕ್ತ ತೆಗೆಯಲಾಗಿದೆ. ಇದರ ಪರಿಣಾಮವಾಗಿ ಮಹಿಳೆಯ ಕೈನಲ್ಲಿ ರಕ್ತ ಹೆಪ್ಪುಗಟ್ಟಿ, ತೀವ್ರ ಸ್ವರೂಪದ ಊತ ಕಾಣಿಸಿಕೊಂಡಿದೆ. ಈ ಬಗ್ಗೆ ಅದೇ ಲ್ಯಾಬ್ ತಂತ್ರಜ್ಞರ ಬಳಿ ಕೇಳಿದಾಗ ಐಸ್ ಪ್ಯಾಕ್ ಇಟ್ಟುಕೊಳ್ಳುವಂತೆ ತಿಳಿಸಿದ್ದರು. ಇದು ಹೆಮಟೋಮಾ ಆದ್ದರಿಂದ ಬೇರೆ ವೈದ್ಯರ ಬಳಿ ಟೆಸ್ಟ್ ಮಾಡಿಸಿಕೊಳ್ಳಿ ಎಂದೂ ಹೇಳಿದ್ದರು ಎಂದು ಮಹಿಳೆ ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ಇದಾದ 2-3 ದಿನಗಳ ನಂತರ ನೋವು ಮತ್ತು ಊತ ಹೆಚ್ಚಾಗಿದ್ದು, ಲ್ಯಾಬ್ನವರಿಗೆ ತಿಳಿಸಿದಾಗ ಅವರು ಆಕೆಯ ಮನೆಗೆ ಬಂದು, ಮಾತನಾಡಿ ಬಗೆಹರಿಸಿಕೊಳ್ಳೋಣವೆಂದು ಹೇಳಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ಆದರೆ ಆಕೆಯ ಮನೆಯಿಂದ ಹೊರಡುವ ಸಮಯದಲ್ಲಿ ಈ ವಿಷಯವನ್ನು ಹೊರಗೆ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಮಹಿಳೆ ನೀಡಿದ ದೂರಿನನ್ವಯ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದು, ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಬಂಗಾಳ ಕದನ : 2ನೇ ಹಂತದಲ್ಲಿ ಭುಗಿಲೆದ್ದ ಹಿಂಸಾಚಾರ.. ಕೇಂದ್ರ ಭದ್ರತಾ ಪಡೆಗಳ ವಿರುದ್ಧ ದೀದಿ ‘ಉಗ್ರವಾದ’ದ ಆರೋಪ


















