ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ರೋಚಕ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಂತದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಕಂಬ್ಯಾಕ್ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿಟ್‌ಮ್ಯಾನ್ ಮೈದಾನಕ್ಕೆ ಮರಳುತ್ತಾರೆಯೇ ಎಂಬ ಅಭಿಮಾನಿಗಳ ಪ್ರಶ್ನೆಗೆ ಫ್ರಾಂಚೈಸಿ ಮಹತ್ವದ ಅಪ್‌ಡೇಟ್ ಒಂದನ್ನು ನೀಡಿದೆ.
ಏಪ್ರಿಲ್ 12ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ಸ್ನಾಯು ಸೆಳೆತಕ್ಕೆ (ಹ್ಯಾಮ್‌ಸ್ಟ್ರಿಂಗ್) ತುತ್ತಾಗಿದ್ದರು. ಅಂದಿನಿಂದ ಅವರು ಮೈದಾನದಿಂದ ಹೊರಗುಳಿದಿದ್ದು, ಅವರ ಫಿಟ್‌ನೆಸ್ ಬಗ್ಗೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಆದರೆ ಇದೀಗ ಮುಂಬೈ ಇಂಡಿಯನ್ಸ್ ತಂಡದ ವಕ್ತಾರರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ರೋಹಿತ್ ಶರ್ಮಾ ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡುಬರುತ್ತಿದೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರು ಆಡುವ ಬಗ್ಗೆ ಅಂತಿಮ ನಿರ್ಧಾರವನ್ನು ಪಂದ್ಯದ ಟಾಸ್ ಸಮಯದಲ್ಲಿಯೇ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಫ್ರಾಂಚೈಸಿ ಇನ್ನೂ ರೋಹಿತ್ ಅವರ ಆಗಮನದ ಬಾಗಿಲನ್ನು ಮುಚ್ಚಿಲ್ಲ ಎಂಬುದು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ಆರಂಭಿಕ ಕ್ರಮಾಂಕದಲ್ಲಿ ಮುಂಬೈಗೆ ಕಾಡುತ್ತಿದೆ ಅಸ್ಥಿರತೆ
ರೋಹಿತ್ ಶರ್ಮಾ ಅವರ ಅನುಪಸ್ಥಿತಿ ಮುಂಬೈ ತಂಡದ ಮೇಲೆ ಬಲವಾದ ಪೆಟ್ಟು ನೀಡಿದೆ ಎಂದರೆ ತಪ್ಪಾಗಲಾರದು. ಕಳೆದ ಕೆಲವು ಪಂದ್ಯಗಳಿಂದ ಮುಂಬೈ ಫ್ರಾಂಚೈಸಿ ಆರಂಭಿಕ ಕ್ರಮಾಂಕದಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿದೆ. ಕ್ವಿಂಟನ್ ಡಿ ಕಾಕ್, ರಿಯಾನ್ ರಿಕೆಲ್ಟನ್ ಮತ್ತು ದಾನಿಶ್ ಮಾಲೇವಾರ್ ಅವರಂತಹ ಆಟಗಾರರನ್ನು ಆರಂಭಿಕರಾಗಿ ಆಡಿಸಿದರೂ ಸ್ಥಿರವಾದ ಪ್ರದರ್ಶನ ಮೂಡಿಬಂದಿಲ್ಲ. ಅದರಲ್ಲೂ ದಾನಿಶ್ ಮಾಲೇವಾರ್ ತಮ್ಮ ಕೊನೆಯ ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 2 ಮತ್ತು 0 ರನ್ ಗಳಿಸಿ ತೀವ್ರ ನಿರಾಸೆ ಮೂಡಿಸಿದ್ದಾರೆ. ಭದ್ರ ಬುನಾದಿ ಸಿಗದ ಕಾರಣ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಮೇಲಿನ ಒತ್ತಡ ಪಂದ್ಯದಿಂದ ಪಂದ್ಯಕ್ಕೆ ಹೆಚ್ಚಾಗುತ್ತಿದೆ.
ತಂಡಕ್ಕೆ ಅತ್ಯಗತ್ಯವಾಗಿದೆ ರೋಹಿತ್ ಶರ್ಮಾ ಬಲ
ಕಳೆದ ಮೂರು ಪಂದ್ಯಗಳನ್ನು ಆಡದಿದ್ದರೂ, ರೋಹಿತ್ ಶರ್ಮಾ ಪ್ರಸ್ತುತ ಟೂರ್ನಿಯಲ್ಲಿ ಮುಂಬೈ ಪರ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 45.66ರ ಉತ್ತಮ ಸರಾಸರಿ ಹಾಗೂ 165ರ ಅತ್ಯುತ್ತಮ ಸ್ಟ್ರೈಕ್ ರೇಟ್‌ನೊಂದಿಗೆ ಒಟ್ಟು 137 ರನ್ ಕಲೆಹಾಕಿದ್ದಾರೆ. ಈ ಅಂಕಿ-ಅಂಶಗಳು ತಂಡಕ್ಕೆ ರೋಹಿತ್ ಅವರ ಅಗತ್ಯ ಎಷ್ಟಿದೆ ಎಂಬುದನ್ನು ಸಾಬೀತುಪಡಿಸುತ್ತವೆ.
ಮಿಚೆಲ್ ಸ್ಯಾಂಟ್ನರ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿದ್ದು, ಅವರ ಬದಲಿಗೆ ಕೇಶವ್ ಮಹಾರಾಜ್ ತಂಡ ಸೇರಿಕೊಂಡಿದ್ದಾರೆ. ಇದರ ಜೊತೆಗೆ ವಿಲ್ ಜಾಕ್ಸ್ ಅವರ ಸ್ಥಾನವೂ ಖಚಿತವಾಗಿಲ್ಲ. ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಫಿಟ್ ಆಗಿ ಕಣಕ್ಕಿಳಿದರೆ ಮುಂಬೈ ಇಂಡಿಯನ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆ ಬಹುತೇಕ ಬಗೆಹರಿಯಲಿದೆ. ಸದ್ಯ ಎಲ್ಲರ ಕಣ್ಣು ಪಂದ್ಯದ ಟಾಸ್ ಪ್ರಕ್ರಿಯೆಯ ಮೇಲಿದ್ದು, ಕೊನೆಯ ಕ್ಷಣದವರೆಗೂ ಅಭಿಮಾನಿಗಳಲ್ಲಿ ಈ ಕುತೂಹಲ ಮುಂದುವರೆಯಲಿದೆ.
ಇದನ್ನೂ ಓದಿ : ಪಂಜಾಬ್‌ನಿಂದ ಶಶಾಂಕ್ ಸಿಂಗ್ ಹೊರಕ್ಕೆ ; ಗಾಯದ ಸಮಸ್ಯೆಯೋ? ಕಳಪೆ ಫೀಲ್ಡಿಂಗ್ ಶಿಕ್ಷೆಯೋ?



















