ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಆಪ್ತನೆಂದು ಎಂದು ನಂಬಿಸಿ ಜಮ್ಮು-ಕಾಶ್ಮೀರ ಮೂಲದ ವೈದ್ಯನಿಗೆ ಕೋಟಿ ಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಿ ಸುಜಯೇಂದ್ರ ವಿರುದ್ಧ ಪೊಲೀಸರು ಬೆಂಗಳೂರಿನ 24ನೇ ಎಸಿಜೆಎಂ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
ಆರೋಪಿ ದೇಶಾದ್ಯಂತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅಲ್ಲಿ ರಾಜಕಾರಣಿಗಳ ಜೊತೆಗಿನ ಫೋಟೋ ಇಟ್ಟುಕೊಂಡು ವಂಚನೆಗೆ ಇಳಿದಿದ್ದ. 2023ರಲ್ಲಿ ಏರ್ಪೋರ್ಟ್ ಬಳಿ ಜಮೀನು ಕೊಡಿಸುವುದಾಗಿ ವಂಚನೆ ಪ್ರಕರಣ ಸಂಬಂಧ ಆರೋಪಿ ವಿರುದ್ಧ ವಿಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ವೈದ್ಯರಾಗಿರುವ ಡಾ.ರಾಜಾ ಲಂಗೇರ್ ಆರೋಪಿ ಸುಜಯೇಂದ್ರನ ಪರಿಚಯವಾಗಿತ್ತು. ಗೃಹ ಸಚಿವ ಅಮಿತ್ ಶಾ ಅವರ ವಿಶೇಷ ಕರ್ತವ್ಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಈತ, ಬೆಂಗಳೂರಿನ ಏರ್ಪೋರ್ಟ್ ಬಳಿ ಪ್ರತಿಷ್ಠಿತ ಮಠಕ್ಕೆ ಸೇರಿರುವ ಜಮೀನಿದ್ದು, ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಅಲ್ಲದೆ, ಸ್ವಾಮೀಜಿ ಕೂಡ ತನ್ನ ಮಾತಿಗೆ ಒಪ್ಪುತ್ತಾರೆ ಎಂದು ಬುರುಡೆ ಬಿಟ್ಟಿದ್ದ.
ಈತನ ಮೋಸ ಅರಿಯದ ವೈದ್ಯ ಡಾ.ರಾಜಾ ಲಂಗೇರ್ ಒಟ್ಟು 1.50 ಕೋಟಿ ರೂಪಾಯಿಗಳನ್ನು ಆರೋಪಿಗೆ ನೀಡಿದ್ದರು. ಆದರೆ ಸುಜಯೇಂದ್ರ ಹೇಳಿದಂತೆ ಜಮೀನು ಕೊಡಿಸದಾಗ ಅನುಮಾನಗೊಂಡು ಆತನ ಬಗ್ಗೆ ವಿಚಾರಿಸಿದಾದ ನಿಜ ಬಣ್ಣ ಬಯಲಾಗಿತ್ತು. ಆ ಬಳಿಕ ಈತನ ಮನೆಯ ಮೇಲೆ ದಾಳಿ ನಡೆಸಿದಾಗ ಕೇಂದ್ರ ಗೃಹ ಸಚಿವಾಲಯ ಮತ್ತು ಲೋಕಭವನದ ಹೆಸರಿನ ಹಲವು ನಕಲಿ ಲೆಟರ್ ಹೆಡ್‌ಗಳು ಮತ್ತು ನಕಲಿ ಸೀಲುಗಳು ಪತ್ತೆಯಾಗಿದ್ದ ಕಾರಣ ಹಗರಣದ ವ್ಯಾಪ್ತಿ ದೊಡ್ಡದಿದೆ ಎಂಬ ಅನುಮಾನ ವ್ಯಕ್ತವಾಗಿತ್ತು.
ಇದನ್ನೂ ಓದಿ : ಹನಿಮೂನ್ ವೇಳೆ ಪತಿಯ ಹತ್ಯೆ : ಪೊಲೀಸರ ಎಡವಟ್ಟಿನಿಂದ ಆರೋಪಿ ಸೋನಂ ರಘುವಂಶಿಗೆ ಜಾಮೀನು!


















