ಗ್ವಾಲಿಯರ್: ವಿಚ್ಛೇದನ ಪಡೆಯಲು ದಂಪತಿಗಳು ಸಾಮಾನ್ಯವಾಗಿ ವರದಕ್ಷಿಣೆ ಕಿರುಕುಳ ಅಥವಾ ಕೌಟುಂಬಿಕ ಕಲಹದಂತಹ ಕಾರಣಗಳನ್ನು ನೀಡುತ್ತಾರೆ. ಆದರೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಹಿಳೆಯೊಬ್ಬರು ವಿಚ್ಛೇದನ ಪಡೆಯಲು ಅನುಸರಿಸಿದ ದಾರಿ ಕಂಡು ನ್ಯಾಯಾಲಯವೇ ದಂಗಾಗಿದೆ. ತನ್ನ ಪತಿಗೆ ಎರಡನೇ ಮದುವೆಯಾಗಿದೆ ಎಂದು ನಂಬಿಸಲು ಆತ ತನ್ನ ಅಕ್ಕನೊಂದಿಗೆ ನಿಂತಿರುವ ಫೋಟೋವನ್ನೇ ಸಾಕ್ಷಿಯಾಗಿ ಬಳಸಿ ವಿಚ್ಛೇದನ ಪಡೆದಿದ್ದಾರೆ. ಈ ಘಟನೆ ಇದೀಗ ಮಧ್ಯಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದೆ.
28 ವರ್ಷಗಳ ದಾಂಪತ್ಯಕ್ಕೆ ಎಳ್ಳುನೀರು
ಗ್ವಾಲಿಯರ್ ನಿವಾಸಿಯಾಗಿರುವ ಈ ಮಹಿಳೆ 1998ರಲ್ಲಿ ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ವಿವಾಹವಾಗಿದ್ದರು. ಪತಿ ಕೆಲಸದ ನಿಮಿತ್ತ ಮನೆಯಿಂದ ದೂರ ಇರುತ್ತಿದ್ದ ಕಾರಣ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ 2015ರಿಂದ ಮಹಿಳೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಹೇಗಾದರೂ ಮಾಡಿ ವಿಚ್ಛೇದನ ಪಡೆಯಬೇಕೆಂದು ನಿರ್ಧರಿಸಿದ ಮಹಿಳೆ, 2021ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ವೇಳೆ ತನ್ನ ಪತಿ ಎರಡನೇ ಮದುವೆಯಾಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಲ್ಲದೆ, ಅದಕ್ಕೆ ಪುರಾವೆಯಾಗಿ ಕುಟುಂಬದ ಒಂದು ಗ್ರೂಪ್ ಫೋಟೋವನ್ನು ಸಲ್ಲಿಸಿದ್ದರು. ಆ ಫೋಟೋದಲ್ಲಿ ತನ್ನ ಪತಿಯ ಪಕ್ಕ ನಿಂತಿದ್ದ ಆತನ ಸ್ವಂತ ಅಕ್ಕನನ್ನೇ ‘ಎರಡನೇ ಪತ್ನಿ’ ಎಂದು ನ್ಯಾಯಾಲಯಕ್ಕೆ ತಪ್ಪಾಗಿ ಪರಿಚಯಿಸಿದ್ದರು.
ಏಕಪಕ್ಷೀಯ ತೀರ್ಪು
ಮಹಿಳೆಯು ನೀಡಿದ ಫೋಟೋವನ್ನೇ ಪ್ರಬಲ ಸಾಕ್ಷಿಯೆಂದು ಪರಿಗಣಿಸಿದ ಗ್ವಾಲಿಯರ್ ಕೌಟುಂಬಿಕ ನ್ಯಾಯಾಲಯವು, ಪತಿಯ ವಾದವನ್ನು ಆಲಿಸದೆಯೇ ಏಕಪಕ್ಷೀಯವಾಗಿ ವಿಚ್ಛೇದನ ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಏಪ್ರಿಲ್ ಮೊದಲ ವಾರದಲ್ಲಿ ವಿಚ್ಛೇದನದ ಪ್ರತಿ ಕೈ ಸೇರಿದಾಗ ಪತಿಗೆ ದಿಗ್ಭ್ರಮೆಯಾಗಿದೆ. ಕೂಡಲೇ ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಿದಾಗ, ತನ್ನ ಅಕ್ಕನನ್ನೇ ಪತ್ನಿ ಎಂದು ಬಿಂಬಿಸಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಲಾಗಿದೆ ಎಂದು ಆರೋಪಿಸಿರುವ ಪತಿ, ಇದೀಗ ಈ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಹೈಕೋರ್ಟ್‌ನಲ್ಲಿ ಸತ್ಯಾಸತ್ಯತೆಯ ವಿಚಾರಣೆ
ಸರ್ಕಾರಿ ವಕೀಲ ಧರ್ಮೇಂದ್ರ ಶರ್ಮಾ ಅವರ ಪ್ರಕಾರ, ಪತಿಯು ಹೈಕೋರ್ಟ್‌ನ ಗ್ವಾಲಿಯರ್ ಪೀಠದಲ್ಲಿ ಈ ಆದೇಶವನ್ನು ಪ್ರಶ್ನಿಸಿದ್ದಾರೆ. ತನ್ನ ಪತ್ನಿ ಉದ್ದೇಶಪೂರ್ವಕವಾಗಿ ನ್ಯಾಯಾಲಯಕ್ಕೆ ಸುಳ್ಳು ಸಾಕ್ಷ್ಯ ನೀಡಿ ಆದೇಶ ಪಡೆದಿದ್ದಾರೆ, ಆದ್ದರಿಂದ ಈ ವಿಚ್ಛೇದನವನ್ನು ರದ್ದುಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸದ್ಯ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಸುಳ್ಳು ಮಾಹಿತಿ ನೀಡಿ ನ್ಯಾಯಾಲಯವನ್ನು ವಂಚಿಸಿದ ಮಹಿಳೆಯ ನಡೆ ಕಾನೂನು ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸತ್ಯ ಮರೆಮಾಚಿ ಪಡೆದ ಈ ವಿಚ್ಛೇದನ ಆದೇಶ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಜಿಂಬಾಬ್ವೆ ಹೋಟೆಲ್‌ಗೆ ನುಗ್ಗಿದ 12 ಅಡಿ ಉದ್ದದ ಮೊಸಳೆ : ಕಿಚನ್ ಕೌಂಟರ್ ಏರಿ ಕುಳಿತ ‘ಅನಿರೀಕ್ಷಿತ ಅತಿಥಿ’!


















