ವಿಜಯನಗರ : ವಿಜಯನಗರ ಜಿಲ್ಲಾ ಪೊಲೀಸರು ವಿವಿಧ ಕಳ್ಳತನ ಪ್ರಕರಣಗಳನ್ನು ಭೇದಿಸಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಹೊಸಪೇಟೆ ಹಾಗೂ ಹರಪನಹಳ್ಳಿ ಉಪ ವಿಭಾಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು 27 ಲಕ್ಷ ರೂಪಾಯಿ ಮೌಲ್ಯದ ಕಳ್ಳತನದ ಮಾಲು ವಶಪಡಿಸಿಕೊಂಡಿದ್ದು, 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣಗಳನ್ನು ಯಶಸ್ವಿಯಾಗಿ ಬೇಧಿಸಿದ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹರಪನಹಳ್ಳಿ ಹಾಗೂ ಚಿತ್ತವಾಡ್ಗಿ ವ್ಯಾಪ್ತಿಯ ಕಲ್ಯಾಣ ಮಂಟಪಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳಲ್ಲಿ ಕಳುವಾಗಿದ್ದ ಬಂಗಾರದ ಆಭರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ತನಿಖೆಯ ವೇಳೆ ಆರೋಪಿಗಳನ್ನು ಬಂಧಿಸಿ ಕಳುವಿನ ಆಸ್ತಿಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 11 ಲಕ್ಷ ರೂಪಾಯಿ ಮೌಲ್ಯದ 6 ಬೈಕ್‌ಗಳು ಹಾಗೂ 33 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2.80 ಲಕ್ಷ ರೂಪಾಯಿ ಮೌಲ್ಯದ 28 ಗ್ರಾಂ ಬಂಗಾರ ಜಪ್ತಿ ಮಾಡಲಾಗಿದೆ.
ಚಿತ್ತವಾಡ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಲಕ್ಷ 75 ಸಾವಿರ ರೂಪಾಯಿ ಮೌಲ್ಯದ 9 ಬೈಕ್‌ಗಳು ವಶಕ್ಕೆ ಪಡೆಯಲಾಗಿದ್ದು, ಹೂವಿನ ಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಲಕ್ಷ ರೂಪಾಯಿ ಮೌಲ್ಯದ 52 ಗ್ರಾಂ ಬಂಗಾರ ಜಪ್ತಿ ಮಾಡಲಾಗಿದೆ.
ಒಟ್ಟಾರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳನ್ನು ಭೇದಿಸಿ ಕಳುವಿನ ಮಾಲನ್ನು ವಶಕ್ಕೆ ಪಡೆಯುವಲ್ಲಿ ವಿಜಯನಗರ ಜಿಲ್ಲಾ ಪೊಲೀಸರು ಯಶಸ್ಸು ಸಾಧಿಸಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕಾರ್ಯವನ್ನು ಜಿಲ್ಲಾ ಎಸ್‌ಪಿ ಜಾಹ್ನವಿ ಶ್ಲಾಘಿಸಿದ್ದು, ಮುಂದೆಯೂ ಇಂತಹ ಕಾರ್ಯಾಚರಣೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ : ಪೂಜೆ ನೆಪದಲ್ಲಿ ಜ್ಯೋತಿಷಿಯ ಕಿಡ್ನಾಪ್ – ಹಲ್ಲೆಗೈದು 4.25 ಲಕ್ಷ ಸುಲಿಗೆ ಮಾಡಿದ ಖದೀಮರು ಅಂದರ್!



















