ಬೆಂಗಳೂರು : ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮಾಜಿ ಪ್ರಿಯತಮನೇ ಯುವತಿಗೆ ಚಾಕುವಿನಿಂದ ಇರಿದ ಘಟನೆ ವರ್ತೂರು ಮುಖ್ಯರಸ್ತೆ ಸಮೀಪ ನಡೆದಿದೆ.
ಕೋಲಾರ ಮೂಲದ ಬಂಡೆ ನವಾಜ್ (18) ಎಂಬಾತ ವೆಸ್ಟ್ ಬೆಂಗಾಲ್ ಮೂಲದ ನಂದಿನಿ ದಾಸ್ (18) ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಬಳಿಕ ತಾನೂ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಇಬ್ಬರನ್ನೂ ಪ್ರತ್ಯೇಕ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಯುವತಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಆರೋಪಿ ನವಾಜ್ ಮತ್ತು ಯುವತಿಗೆ ಕಳೆದ ಮೂರು ವರ್ಷಗಳಿಂದ ಪರಿಚಯವಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯ ಕುಟುಂಬ ಈ ಸಂಬಂಧಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ನಂದಿನಿ ದಾಸ್‌ಗೆ ಬೇರೊಬ್ಬ ಯುವಕನೊಂದಿಗೆ ಮದುವೆ ಮಾಡಲು ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ.
ಈ ವಿಚಾರ ತಿಳಿದ ಬಂಡೆ ನವಾಜ್, ಚಾಕು ಹಿಡಿದು ಯುವತಿ ಮನೆಗೆ ತೆರಳಿ ಬೇರೆಯವರನ್ನು ಮದುವೆಯಾಗಬಾರದು ಎಂದು ಜಗಳ ಆರಂಭಿಸಿದ್ದಾನೆ. ಇದಕ್ಕೆ ಯುವತಿ, ಮನೆಯವರು ಒಪ್ಪುತ್ತಿಲ್ಲ ಮತ್ತು ಅವರ ಮಾತಿನಂತೆ ನಡೆದುಕೊಳ್ಳುವುದಾಗಿ ಹೇಳಿದ್ದಾಳೆ. ಇದರಿಂದ ಕೋಪಗೊಂಡ ನವಾಜ್, ನಂದಿನಿ ದಾಸ್ ಕುತ್ತಿಗೆ, ಕೈ ಮತ್ತು ತೊಡೆ ಸೇರಿದಂತೆ ಹಲವು ಭಾಗಗಳಿಗೆ ಚಾಕುವಿನಿಂದ ಇರಿದಿದ್ದಾನೆ.
ಹಲ್ಲೆ ನಡೆಸಿದ ಬಳಿಕ ಬಂಡೆ ನವಾಜ್ ತಾನೂ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರನ್ನೂ ಪ್ರತ್ಯೇಕ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸದ್ಯ ನಂದಿನಿ ದಾಸ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ನವಾಜ್‌ಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ವಿಜಯನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ ; 27 ಲಕ್ಷ ಮೌಲ್ಯದ ಕದ್ದ ಮಾಲು ವಶ.. 6 ಮಂದಿ ಬಂಧನ!



















