ಉಡುಪಿ : ಸೆಲ್ಪಿ ತೆಗೆದುಕೊಳ್ಳುವ ನೆಪದಲ್ಲಿ ವಿಡಿಯೋ ಮಾಡಿಕೊಂಡು, ಅದನ್ನೇ ಬ್ಲ್ಯಾಕ್‌ಮೇಲ್ ಅಸ್ತ್ರವಾಗಿಸಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 51 ಲಕ್ಷ ರೂ. ಅಧಿಕ ಹಣ ಹಾಗೂ ಚಿನ್ನಾಭರಣ ವಂಚಿಸಿರುವ ಬಗ್ಗೆ ಝೀನತ್ ಮತ್ತು ಸ್ನೇಹಿತೆ ಗೀತಾ ರಾವ್ ವಿರುದ್ಧ ನಗರ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನಂಜೆ ತೇಜೇಶ್ವರ ರಾವ್ 2018ರಿಂದ 2022ರವರೆಗೆ ಉಡುಪಿಯ ಮಹಾಮಾಯ ಕಾಂಪ್ಲೆಕ್ಸ್‌ನಲ್ಲಿ ಮೋದಿಕೇರ್ ಸ್ಟಾಕ್ ಪಾಯಿಂಟ್ ಅಂಗಡಿಯನ್ನು ಹೊಂದಿದ್ದು, ಈ ಸಮಯದಲ್ಲಿ ಝೀನತ್ ಮತ್ತು ಗೀತಾರಾವ್ ಎಂಬವರ ಪರಿಚಯವಾಗಿತ್ತು. ಮೋದಿಕೇರ್ ಕಛೇರಿಯಲ್ಲಿ ಜೀನತ್, ತೇಜೇಶ್ವರ ರಾವ್‌ರೊಂದಿಗೆ ಸೆಲ್ಪಿ ತೆಗೆದುಕೊಳ್ಳುವ ನೆಪದಲ್ಲಿ ಒಂದು ವಿಡಿಯೋ ಮಾಡಿಕೊಂಡು ಅಕ್ರಮ ಲಾಭವನ್ನು ಗಳಿಸುವ ಉದ್ದೇಶದಿಂದ ಬ್ಲಾಕ್‌ಮೇಲ್ ಮಾಡುತ್ತಿದ್ದಳು ಎಂದು ದೂರಲಾಗಿದೆ.
ಹೀಗೆ ಜೀನತ್, ತೇಜೇಶ್ವರ ರಾವ್ ಅವರಿಂದ ಹಂತ ಹಂತವಾಗಿ 36,84,000ರೂ.ವನ್ನು ಮೋಸದಿಂದ ತೆಗೆದು ಕೊಂಡಿದ್ದರು. ಅದೇ ರೀತಿ ಗೀತಾ ರಾವ್ ಕೂಡ ತೇಜೇಶ್ವರ ರಾವ್ ಅವರನ್ನು ಬ್ಲಾಕ್‌ಮೇಲ್ ಮಾಡಿ ಹಂತ ಹಂತವಾಗಿ 15,00,000ರೂ. ಹಣ, ಚಿನ್ನಾಭರಣ ಹಾಗೂ ಕೆಲವು ಖಾಲಿ ಚೆಕ್‌ಗಳನ್ನು ಮೋಸದಿಂದ ತೆಗೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಾರದಲ್ಲೇ ಝೀನತ್ ವಿರುದ್ಧ ದಾಖಲಾದ ಮೂರನೇ ಪ್ರಕರಣ
ಕಳೆದ ನಾಲ್ಕು ದಿನದ ಹಿಂದೆ ಉಡುಪಿ ಮೂಲದ ಉದ್ಯಮಿಯೊಬ್ಬರು ಝೀನತ್ ವಿರುದ್ಧ ಪ್ರಕರಣ ದಾಖಲಿಸಿದ್ದು, ದೂರುದಾರರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ವೇಳೆ ಆರೋಪಿತೆಯ ಪರಿಚಯವಾಗಿದ್ದು, ಇಬ್ಬರೂ ಸೇರಿ ಉಡುಪಿಯಲ್ಲಿ ಜಂಟಿಯಾಗಿ ರಿಯಲ್ ಎಸ್ಟೇಟ್ ಕಚೇರಿ ಆರಂಭಿಸಿದ್ದರು.
ಝೀನತ್ ಮಾತು ನಂಬಿ ಜಮೀನು ಖರೀದಿಗೆ ಹೂಡಿಕೆ ಮಾಡುವ ಉದ್ದೇಶದಿಂದ ದೂರುದಾರರು ₹70 ಲಕ್ಷ ನೀಡಿದ್ದರು. ಆದರೆ, ಆಕೆ ಆ ಹಣವನ್ನು ಜಮೀನು ಖರೀದಿಗೆ ಬಳಸದೆ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿತ್ತು.
ಕಚೇರಿ ಮುಚ್ಚುವ ಸಂದರ್ಭದಲ್ಲಿ ಕೆಲವು ಕಡತಗಳು ಹಾಗೂ ಪೆನ್‌ಡ್ರೈವ್ ದೊರೆತಿದ್ದು, ಅವುಗಳಲ್ಲಿ ಹಲವಾರು ರಾಜಕೀಯ ಮುಖಂಡರು ಸಹಿತ ಗಣ್ಯ ವ್ಯಕ್ತಿಗಳ ಖಾಸಗಿ ಹಾಗೂ ಅಶ್ಲೀಲ ಛಾಯಾಚಿತ್ರ ಮತ್ತು ವಿಡಿಯೋಗಳು ಇದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಇದರ ಬೆನ್ನಲ್ಲೇ ಅಲ್ಪಸಂಖ್ಯಾತರ ಯೋಜನೆಯಡಿ ₹2 ಕೋಟಿ ಸಾಲ ಮಂಜೂರಾಗಲಿದ್ದು, ಸಾಲ ಬಂದ ಕೂಡಲೇ ಒಂದು ವರ್ಷದೊಳಗೆ ಹಣ ಹಾಗೂ ಚಿನ್ನವನ್ನು ಹಿಂದಿರುಗಿಸುವುದಾಗಿ ನಂಬಿಸಿ ಹೆರ್ಗಾ ಗ್ರಾಮದ ತ್ರಿಶಂಕು ನಗರ ನಿವಾಸಿ ಶ್ರೀಮತಿ ಮೋಹಿನಿ ಶೆಟ್ಟಿಗಾರ್ ರಿಂದ 148 ಗ್ರಾಂ ಚಿನ್ನ ಪಡೆದು ಅಡವಿರಿಸಿ ಹಣ ಪಡೆದು ವಂಚಿಸಿದ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಲಾಗಿತ್ತು.
ಇದನ್ನೂ ಓದಿ : ಪೂಜೆ ನೆಪದಲ್ಲಿ ಜ್ಯೋತಿಷಿಯ ಕಿಡ್ನಾಪ್ – ಹಲ್ಲೆಗೈದು 4.25 ಲಕ್ಷ ಸುಲಿಗೆ ಮಾಡಿದ ಖದೀಮರು ಅಂದರ್!


















