ಕೇರಳಂ : ಕೇರಳಂನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಅಭೂತಪೂರ್ವ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿ.ಡಿ. ಸತೀಶನ್ ಅವರು ಇಂದು (ಸೋಮವಾರ) ಕೇರಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಬರೋಬ್ಬರಿ 10 ವರ್ಷಗಳ ಬಳಿಕ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ.
ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿ.ಡಿ.ಸತೀಶನ್ ಮತ್ತು ಅವರ 20 ಸದಸ್ಯರ ಸಚಿವ ಸಂಪುಟಕ್ಕೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ರಾಹುಲ್ ಗಾಂಧಿ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಪ್ರಮುಖ ನಾಯಕರು ಸಾಕ್ಷಿಯಾದರು. ಪ್ರಮಾಣ ವಚನ ಸ್ವೀಕಾರದ ಬಳಿಕ 61 ವರ್ಷದ ನೂತನ ಮುಖ್ಯಮಂತ್ರಿಗಳು ವೇದಿಕೆಯಲ್ಲಿದ್ದ ನಿರ್ಗಮಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಬಿಜೆಪಿಯ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರಿಗೆ ಹಸ್ತಲಾಘವ ಮಾಡಿ ಗೌರವ ಸಲ್ಲಿಸಿದರು.

ಹೈಕಮಾಂಡ್ ನಿಲುವು ಬದಲಿಸಿದ ಸತೀಶನ್ ಜನಪ್ರಿಯತೆ
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಒಕ್ಕೂಟವು 140 ಸ್ಥಾನಗಳ ಪೈಕಿ 102 ಕ್ಷೇತ್ರಗಳಲ್ಲಿ ಅಭೂತಪೂರ್ವ ಜಯ ಸಾಧಿಸಿತ್ತು. ಇದರಲ್ಲಿ ಕಾಂಗ್ರೆಸ್ 63 ಮತ್ತು ಐಯುಎಂಎಲ್ 22 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಕಾಂಗ್ರೆಸ್ ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದ ಸತೀಶನ್ ಅವರೇ ಮುಖ್ಯಮಂತ್ರಿ ಹುದ್ದೆಗೆ ಮೊದಲ ಆಯ್ಕೆಯಾಗಿದ್ದರು. ಆದರೆ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಮುಂಚೂಣಿಗೆ ತಂದಿತ್ತು. ಶಾಸಕರು ಕೂಡ ಹೈಕಮಾಂಡ್ ನಿರ್ಧಾರಕ್ಕೆ ಒಲವು ತೋರಿದ್ದರು.
ಆದರೆ, ಸತೀಶನ್ ಪರವಾಗಿ ಸಾರ್ವಜನಿಕರು ಹಾಗೂ ಮೈತ್ರಿಪಕ್ಷ ಐಯುಎಂಎಲ್‌ನಿಂದ ತೀವ್ರ ಬೆಂಬಲ ವ್ಯಕ್ತವಾಯಿತು. ವಯನಾಡಿನಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ವಿರುದ್ಧ ಎಚ್ಚರಿಕೆಯ ಪೋಸ್ಟರ್‌ಗಳು ಕೂಡ ಪ್ರತ್ಯಕ್ಷವಾಗಿದ್ದವು. ತೀವ್ರಗೊಂಡ ಭಿನ್ನಾಭಿಪ್ರಾಯಗಳ ನಡುವೆ, ಇಂಡಿಯಾ ಒಕ್ಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕೇರಳದ ಹಿರಿಯ ನಾಯಕ ಎ.ಕೆ. ಆ್ಯಂಟನಿ ನಡುವೆ ನಡೆದ ದೂರವಾಣಿ ಸಂಭಾಷಣೆಯು ಅಂತಿಮವಾಗಿ ವಿ.ಡಿ. ಸತೀಶನ್ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿಯುವಂತೆ ಮಾಡಿತು.
14 ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನ
ನೂತನ ಸಚಿವ ಸಂಪುಟದಲ್ಲಿ ಕಾಂಗ್ರೆಸ್‌ನಿಂದ 11 ಮತ್ತು ಐಯುಎಂಎಲ್‌ನಿಂದ 5 ಸೇರಿದಂತೆ ಒಟ್ಟು 20 ಸಚಿವರು ಸ್ಥಾನ ಪಡೆದಿದ್ದಾರೆ. ಸಂಪುಟದಲ್ಲಿ 14 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಕಾಂಗ್ರೆಸ್‌ನಿಂದ ಹಿರಿಯ ನಾಯಕರಾದ ರಮೇಶ್ ಚೆನ್ನಿತ್ತಲ, ಕೆ. ಮುರಳೀಧರನ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್, ಪಿ.ಸಿ. ವಿಷ್ಣುನಾಥ್, ರೋಜಿ ಎಂ. ಜಾನ್, ಬಿಂದು ಕೃಷ್ಣ ಮುಂತಾದವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಿತ್ರಪಕ್ಷ ಐಯುಎಂಎಲ್‌ನಿಂದ ಕೆ.ಎಂ.ಶಾಜಿ, ವಿ.ಇ.ಅಬ್ದುಲ್ ಗಫೂರ್ ಸೇರಿದಂತೆ ಐವರು ಸಚಿವರಾಗಿದ್ದಾರೆ. ಉಳಿದಂತೆ ಕೇರಳ ಕಾಂಗ್ರೆಸ್ (ಜೋಸೆಫ್), ಆರ್‌ಎಸ್‌ಪಿ, ಕೇರಳ ಕಾಂಗ್ರೆಸ್ (ಜಾಕೋಬ್) ಮತ್ತು ಸಿಎಂಪಿಗೆ ತಲಾ ಒಂದು ಸ್ಥಾನ ನೀಡಲಾಗಿದೆ. ಹಿರಿಯ ನಾಯಕ ತಿರುವಂಚೂರ್ ರಾಧಾಕೃಷ್ಣನ್ ಅವರನ್ನು ಸ್ಪೀಕರ್ ಆಗಿ ಮತ್ತು ಶಾನಿಮೋಲ್ ಉಸ್ಮಾನ್ ಅವರನ್ನು ಡೆಪ್ಯುಟಿ ಸ್ಪೀಕರ್ ಆಗಿ ಘೋಷಿಸಲಾಗಿದೆ.
ವಿಐಪಿ ಸಂಸ್ಕೃತಿ, ದುಂದುವೆಚ್ಚಕ್ಕೆ ಬ್ರೇಕ್
ಆಡಳಿತಾತ್ಮಕ ಅನುಭವ ಇಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವಿ.ಡಿ. ಸತೀಶನ್ ಅವರು ರಾಜ್ಯದ ಆರ್ಥಿಕ ಶಿಸ್ತಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಪ್ರಕಟಿಸಿದ್ದಾರೆ. ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ರಾಜ್ಯದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸತತವಾಗಿ ಧ್ವನಿ ಎತ್ತಿದ್ದ ಅವರು, ಇದೀಗ ಸರ್ಕಾರಿ ಮಟ್ಟದಲ್ಲಿನ ದುಂದುವೆಚ್ಚ ಹಾಗೂ ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಿದ್ದಾರೆ.
ಮುಖ್ಯಮಂತ್ರಿಗಳ ಭದ್ರತೆಗಾಗಿ ಇದ್ದ ಬೃಹತ್ ಬೆಂಗಾವಲು ವಾಹನಗಳ ಸಂಸ್ಕೃತಿಯನ್ನು ರದ್ದುಗೊಳಿಸಿದ್ದಾರೆ. ಅಲ್ಲದೆ, ಪ್ರತಿ ಬಾರಿ ಹೊಸ ಸರ್ಕಾರ ಬಂದಾಗ ಸಚಿವರಿಗೆ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿರುವ ಸತೀಶನ್, ಹಿಂದಿನ ಸರ್ಕಾರದ ಅವಧಿಯಲ್ಲಿದ್ದ ಹಳೆಯ ವಾಹನಗಳನ್ನೇ ಬಳಸಲು ನಿರ್ಧರಿಸುವ ಮೂಲಕ ರಾಜ್ಯದ ಜನತೆಗೆ ಹೊಸ ಆಡಳಿತದ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಯಾರಿಗೆಲ್ಲಾ ಸಚಿವ ಸ್ಥಾನ?
- ರಮೇಶ್ ಚೆನ್ನಿತ್ತಲ
- ಸನ್ನಿ ಜೋಸೆಫ್
- ಪಿಕೆ ಕುನ್ಹಾಲಿಕುಟ್ಟಿ
- ಕೆ ಮುರುಳೀಧರನ್
- ಮಾನ್ಸ್ ಜೋಸೆಫ್
- ಶಿಬು ಬೇಬಿ ಜಾನ್
- ಅನೂಪ್ ಜೇಕಬ್
- ಸಿಪಿ ಜಾನ್
- ಬಿಂದು ಕೃಷ್ಣ
- ವಿ.ಇ ಅಬ್ದುಲ್ ಗಫೂರ್
- ಟಿ ಸಿದ್ದೀಕ್
- ಕೆ ಎ ತುಳಸಿ
- ಒ ಜೆ ಜನೀಶ್
- ಶಾನಿಮೋಲ್ ಉಸ್ಮಾನ್
- ತಿರುವಾಂಕೂರ್ ರಾಧಾಕೃಷ್ಣನ್
- ಪಿ ಕೆ ಬಶೀರ್
- ಕೆ ಎಂ ಶಾಜಿ
- ಎಂ ಲೈಜು
- ರೋಜಿ ಎಂ ಜಾನ್
- ಎನ್ ಸಂಶುದ್ದೀನ್
- ಎ.ಪಿ ಅನಿಲ್ ಕುಮಾರ್
- ಪಿಸಿ ವಿಷ್ಣು
ಇದನ್ನೂ ಓದಿ : ಲೀಸ್ & ಬಾಡಿಗೆ ಮನೆಗಳ ಹೆಸರಲ್ಲಿ ಕೋಟ್ಯಾಂತರ ರೂ. ವಂಚನೆ – ‘ಜಾನ್ಸ್ ಅಸೆಟ್’ ಕಂಪನಿ ವಿರುದ್ಧ FIR!



















